ಬೀದರ್: ಬಿಯರ್ ಎಂದ್ರೆ ಸಾಕು ಮದ್ಯ ಪ್ರಿಯರಿಗೆ ಅರ್ಧ ನಶೆ ಏರುತ್ತದೆ. ಮದ್ಯ ಖಾಲಿಯಾದರೆ ಬಾಟಲ್‍ನನ್ನು ಎಲ್ಲಂದರಲ್ಲಿ ಎಸೆಯುತ್ತಾರೆ. ಆದರೆ ಇದೇ ಬಾಟಲ್‍ಗಳು ಬೀದರ್ ರೈತರೊಬ್ಬರ ಜಮೀನನ್ನು ಕಾಯುತ್ತಿವೆ.
ಔರಾದ್ ತಾಲೂಕಿನ ನಾಗೂರ ಗ್ರಾಮದ ರೈತ ಶಿವರಾಜ ಸಾಗರ್ ಅವರು ಇಂತಹ ವಿನೂತನ ಪ್ರಯೋಗದ ಮೂಲಕ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಜಮೀನಿಗೆ ನುಗ್ಗುತ್ತಿದ್ದ ಕಾಡು ಹಂದಿ, ಜಿಂಕೆ ಹಾಗೂ ತೋಳಗಳು ಬೆಳೆ ಹಾಳು ಮಾಡುತ್ತಿದ್ದವು. ಇದನ್ನು ತಡೆಯುವ ಉದ್ದೇಶದಿಂದ ಶಿವರಾಜ ಸಾಗರ್ ಈ ರೀತಿ ಉಪಾಯ ಕಂಡುಕೊಂಡಿದ್ದಾರೆ.
Advertisement
ಏನಿದು ಉಪಾಯ?
ಜಮೀನಿನ ಸುತ್ತ ಹಾಗೂ ಮಧ್ಯದಲ್ಲಿ ಇರುವ ಮರಗಳಿಗೆ ನೇತಾಡುವಂತೆ ಎರಡು-ಮೂರು ಬಿಯರ್ ಬಾಟಲ್‍ಗಳನ್ನು ಜೋಡಿಸಿ ನೇತಾಡುವಂತೆ ಕಟ್ಟಿದ್ದಾರೆ. ಗಾಳಿ ಬೀಸಿದರೆ ಬಾಟಲ್‍ಗಳು ಒಂದಕ್ಕೊಂದು ಬಡಿದು ಒಂದು ರೀತಿಯ ಶಬ್ದವನ್ನು ಹೊಮ್ಮಿಸುತ್ತವೆ. ಇದರಿಂದಾಗಿ ಜಮೀನಿನಲ್ಲಿ ಯಾರೋ ಇದ್ದಾರೆ ಅಂತಾ ಪ್ರಾಣಿಗಳು ಹೆದರಿ, ಅಲ್ಲಿಂದ ಓಡುತ್ತವೆ.
Advertisement
Advertisement
ಸಿಂದಗಿ ಭಾಗದ ನಾಗೂರ, ಬೋರ್ಗಿ, ಜೋಜನಾ, ಚಟನಳ್ಳಿ, ಜಿರಗಾ, ಮುಸ್ತಾಪುರ, ಪಾಷಾಪುರ ಹಾಗೂ ಕೌಡಗಾಂವ್ ಗ್ರಾಮಗಳ ಜಮೀನುಗಳಿಗೆ ಕಾಡು ಹಂದಿ, ಜಿಂಕೆ, ಮಂಗ ಹಾಗೂ ಹಕ್ಕಿಗಳ ಕಾಟ ಹೆಚ್ಚಾಗುತ್ತಿದೆ. ಅದರಲ್ಲೂ ಮುಂಗಾರಿನ ಹೆಸರು, ಉದ್ದು, ಜೋಳ, ತೊಗರಿ, ಸೋಯಾಬಿನ್ ಬೆಳೆಗಳನ್ನು ರಾತ್ರಿ ವೇಳೆ ರಕ್ಷಣೆ ಮಾಡಿಕೊಳ್ಳುವುದೇ ಕಷ್ಟವಾಗಿತ್ತು.
Advertisement
ಜಿಂಕೆ ಹಾಗೂ ಕಾಡು ಹಂದಿ ಹಾವಳಿ ತಡೆಯಲು ಈ ಮೊದಲು ರೈತರು ಜಮೀನಿನ ಸುತ್ತ ಮುಳ್ಳಿನ ಬೇಲಿ ಹಾಕುತ್ತಿದ್ದರು. ಆದರೂ ಬೆಳೆ ರಕ್ಷಣೆ ಕಷ್ಟವಾಗಿತ್ತು. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮುಳ್ಳಿನ ಕಂಟಿ ಕೂಡ ಸಿಗುತ್ತಿಲ್ಲ. ಇದನ್ನು ಅರಿತ ರೈತ ಶಿವರಾಜ ಅವರು ಡಾಬಾ, ಹೋಟೆಲ್ ಹಾಗೂ ಬಾರ್ ಗಳಲ್ಲಿ ಸಿಗುವ ಖಾಲಿ ಬಿಯರ್ ಬಾಟಲ್‍ಗಳನ್ನು ತಂದಿದ್ದಾರೆ. ಮೊದಲು ಪ್ರಾಯೋಗಿಕವಾಗಿ ಎರಡು ಬಾಟಲ್‍ಗಳನ್ನು ಮರಕ್ಕೆ ನೇತುಬಿಟ್ಟು ಕಟ್ಟಿದ್ದಾರೆ. ಅವುಗಳ ಶಬ್ದದಿಂದ ಜಮೀನಿನಲ್ಲಿ ಯಾರೋ ಇದ್ದಾರೆ ಅಂತಾ ಹೆದರಿ ವನ್ಯ ಜೀವಿಗಳು ಹಾಗೂ ಪಕ್ಷಿಗಳು ಜಮೀನಿನ ಕಡೆಗೆ ಬರಲು ಹಿಂಜರಿಯುತ್ತಿವೆ. ತಮ್ಮ ಪ್ರಯೋಗದಿಂದ ಯಶಸ್ವಿಯಾದ ರೈತ ಶಿವರಾಜ್ ಅವರು ಜಮೀನಿನ ಸುತ್ತಲಿನ ಮರಗಳಿಗೆ ಬಾಟಲ್ ಕಟ್ಟಿ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv