ದುಸ್ಥಿತಿ ತಲುಪಿದ 25 ವರ್ಷಗಳ ಹಳೇ ಸೇತುವೆ – ನಿತ್ಯ ಜೀವ ಭಯದಲ್ಲೇ ಸವಾರರ ಸಂಚಾರ

Public TV
1 Min Read
bidar kandagola bridge

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಕಂದಗೋಳ ಗ್ರಾಮದ ಬಳಿ ಇರುವ 25 ವರ್ಷಗಳ ಹಳೇ ಸೇತುವೆ ಬೀಳುವ ಹಂತದಲ್ಲಿದ್ದು, ವಾಹನ ಸವಾರರು ಜೀವಭಯದಲ್ಲೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

25 ವರ್ಷಗಳ ಹಳೆಯ ಡೇಂಜರ್ ಬ್ರಿಡ್ಜ್ ಇದಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಬೀಳುವ ಹಂತದಲ್ಲಿದೆ. ಬಹುತೇಕ ತಡೆಗೋಡೆ ಕುಸಿದು ಬಿದ್ದಿದ್ದು, ಅಪಘಾತವಾದರೆ ನದಿ ಪಾಲಾಗೋದು ಗ್ಯಾರಂಟಿ.

bidar bridge

ಸಚಿವ ರಹೀಂಖಾನ್ ಹಾಗೂ ಮಾಜಿ ಸಚಿವ ಚೌಹಾಣ್‌ರ ರಾಜಕೀಯ ಹಗ್ಗ ಜಗ್ಗಾಟಕ್ಕೆ ಈ ಡೇಂಜರ್ ಸೇತುವೆ ಕುಸಿಯುವ ಹಂತಕ್ಕೆ ಬಂದಿದೆ. ಹೀಗಾಗಿ, ಜನರು ಇಂಥಾ ಸೇತುವೆಗಳ ಮೇಲೆ ಸಂಚಾರ ಮಾಡಲು ಭಯ ಬೀಳುತ್ತಿದ್ದಾರೆ. ಜನಪ್ರತಿನಿಧಿಗಳ ಜಟಾಪಟಿ ಹಾಗೂ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಕಂದುಕೋಳ ಸೇತುವೆ ಬೀಳುವ ಹಂತಕ್ಕೆ ತಲುಪಿದೆ.

ಈ ಸೇತುವೆ ಮೇಲೆ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಸರ್ಕಾರಿ ಬಸ್‌ಗಳು, ಕಬ್ಬು ತುಂಬಿದ ಭಾರಿ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳು ಓಡಾಡುವಾಗ ಸೇತುವೆ ನಡುಗುತ್ತದೆ. ಈಗಾಗಲೇ ಹಲವಾರು ಬಾರಿ ವಾಹನಗಳು ಸೇತುವೆಯ ತಡೆಗೋಡೆಗಳಿಗೆ ಡಿಕ್ಕಿಯಾದ ಪರಿಣಾಮ, ಸೇತುವೆಯ ತಡೆ ಗೋಡೆಗಳು ಕುಸಿದು ಬಿದ್ದಿವೆ. ಜೊತೆಗೆ ಈ ಸೇತುವೆ ಮೇಲೆ ಹತ್ತಾರು ಅಪಘಾತಗಳು ಆಗಿ ಅದೆಷ್ಟೋ ಜನರಿಗೆ ಗಂಭೀರ ಗಾಯಗಳಾಗಿವೆ. ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ.

ಬೀದರ್‌ನಿಂದ ಔರಾದ್‌ನ ಹಳ್ಳಿಗಳಿಗೆ ಹೋಗುವ ರಾಜ್ಯ ಹೆದ್ದಾರಿಯಾಗಿದ್ದು, ಪ್ರತಿದಿನ ಸರ್ಕಾರಿ ಬಸ್‌ಗಳು ಇಲ್ಲಿಂದಲ್ಲೇ ಸಂಚಾರ ಮಾಡುತ್ತವೆ. ಬೀದರ್ ಟು ಔರಾದ್, ಬೀದರ್ ಟು ಚಿಂತಾಕಿ, ವಡಗಾಂವ್, ಸಂತಪೂರ್, ವಲ್ಲೇಪೂರು, ತೆಲಂಗಾಣದ ಬಸ್‌ಗಳು ಇಲ್ಲಿಂದ ಸಂಚಾರ ಮಾಡುತ್ತಿವೆ.

ಇಲ್ಲಿನ ಸ್ಥಳೀಯ ಶಾಸಕ, ಮಾಜಿ ಸಚಿವರ ಪ್ರಭು ಚೌಹಾಣ್ ಹಾಗೂ ಅಧಿಕಾರಿಗಳು ಸೇತುವೆ ದುರಸ್ತಿ ಮಾಡುವ ಕೆಲಸ ಮಾಡುತ್ತಿಲ್ಲ. ಕಂದಗೋಳ ಬ್ರಿಡ್ಜ್ ಎರಡು ಕ್ಷೇತ್ರದ ಮಧ್ಯೆ ಬಂದರೂ, ಈ ಕಡೆ ಸಚಿವ ರಹೀಂಖಾನ್ ಕೂಡಾ ದುರಸ್ತಿ ಮಾಡುವ ಕೆಲಸ ಮಾಡುತ್ತಿಲ್ಲ. ಸೇತುವೆ ದುರಸ್ತಿ ಮಾಡಿ ಎಂದು ಹಲವು ಬಾರಿ ಮನವಿ ಸಲ್ಲಿಸಿದರೂ, ಯಾರೂ ಕೂಡ ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share This Article