ಬೀದರ್: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಕ್ಲಿನಿಕಗಳು ಮುಚ್ಚಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಎಲ್ಲಾ ಖಾಸಗಿ ಕ್ಲಿನಿಕ್‍ಗಳು ತೆರೆದು ಸಾಮಾನ್ಯ ಲಕ್ಷಣ ಕಂಡು ಬರುವ ರೋಗಿಗಳಿಗೆ ಚಿಕಿತ್ಸೆ ಒದಗಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಆರ್ ಮಹಾದೇವ್ ಅವರು ಡಿಎಚ್‍ಓ ಅವರಿಗೆ ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ತಾಲೂಕಿನ ತಹಶೀಲ್ದಾರ್ ಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಡಿಸಿ ವಿಡಿಯೋ ಸಂವಾದ ನಡೆಸಿದರು. ಕೊರೊನಾ ವೈರಾಣು ತೀವ್ರ ಹರಡುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ವಹಿಸುವ ನಿಟ್ಟಿನಲ್ಲಿ ಜನತೆಗೆ ಈಗ ಸಕಾಲಕ್ಕೆ ಚಿಕಿತ್ಸೆ ಕೊಡಬೇಕಿದೆ. ಹೀಗಿದ್ದರೂ ಖಾಸಗಿ ಕ್ಲಿನಿಕ್‍ಗಳು ಮುಚ್ಚಿದಲ್ಲಿ ಅಂತಹ ಕ್ಲಿನಿಕ್‍ಗಳ ಪರವಾನಿಗೆಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
Advertisement
Advertisement
ವಿದೇಶ, ಹೊರ ರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿ ಇರುವ ಜನರ ಬಗ್ಗೆ ಸರಿಯಾದ ರೀತಿಯಲ್ಲಿ ಗಮನ ಕೊಡಬೇಕು ಎಂದು ಎಲ್ಲಾ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸಾಮಾನ್ಯ ರೋಗಿಗಳು ಬಂದರೂ ಕೂಡ ಅಂತರ ಕಾಯ್ದುಕೊಂಡು ಅವರಿಗೆ ತಪಾಸಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
Advertisement
ಈ ವೇಳೆ ಸಿಇಓ ಗ್ಯಾನೇಂದ್ರಕುಮಾರ್ ಗಂಗವಾರ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ ರೆಡ್ಡಿ, ಬ್ರಿಮ್ಸ್ ನಿರ್ದೇಶಕರಾದ ಡಾ. ಶಿವಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ನಗರಸಭೆ ಪೌರಾಯುಕ್ತರಾದ ಬಸಪ್ಪ, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ. ರತಿಕಾಂತ ಸ್ವಾಮಿ, ಇಂದುಮತಿ ಪಾಟೀಲ್, ಜಿಲ್ಲಾ ಕಣ್ಗಾವಲು ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಕೃಷ್ಣಾರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.