ರಾಮನಗರ: ಮಧ್ಯರಾತ್ರಿ ವೇಳೆ ಏಕಾಏಕಿ ಪೆಟ್ರೋಲ್ ಬಂಕ್ ಗಳಿಗೆ ನುಗ್ಗಿ, ಮಾರಕಾಸ್ತಗಳಿಂದ ಬೆದರಿಸಿ ದರೋಡೆ ನಡೆಸುತ್ತಿದ್ದ ಎಂಟು ಮಂದಿ ದರೋಡೆಕೋರರನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸಕರೆಹಳ್ಳಿ ಗ್ರಾಮದ ನಿವಾಸಿ ಯೋಗಾನಂದ, ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿ ಅಭಿಷೇಕ್, ತಲಘಟ್ಟಪುರ ನಿವಾಸಿ ರಮೇಶ್, ಬಾಪೂಜಿನಗರದ ನಿವಾಸಿಗಳಾದ ಚೇತನ, ಸುನೀಲ್ ಕುಮಾರ್, ತೇಜಸ್, ದೊಡ್ಡಬಸ್ತಿ ನಿವಾಸಿ ಉದಯ್, ಆರುಂಧತಿನಗರದ ನಿವಾಸಿ ಸಂಜಯ್ ಕುಮಾರ್ ಬಂಧಿತ ಆರೋಪಿಗಳು.
Advertisement
Advertisement
ಬಂಧಿತರು ಬರೀ ಪೆಟ್ರೋಲ್ ಬಂಕ್ ಗಳನ್ನೇ ಟಾರ್ಗೆಟ್ ಮಾಡಿ ದರೋಡೆ ನಡೆಸುತ್ತಿದ್ದರು. ಕಾರ್ ಗಳನ್ನ ಕಳ್ಳತನ ಮಾಡಿ ನಂಬರ್ ಪ್ಲೇಟ್ ಬದಲಿಸಿ ಮಂಕಿ ಕ್ಯಾಪ್ ಧರಿಸಿ ದರೋಡೆ ಮಾಡುತ್ತಿದ್ದರು. ಇದುವರೆಗೂ ರಾಮನಗರ ಜಿಲ್ಲೆಯಲ್ಲದೇ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ 12 ಕಡೆಗಳಲ್ಲಿ ದರೋಡೆ ನಡೆಸಿದ್ದರು. ಬಂಧಿತರಿಂದ 3 ಕಾರು, 1 ಬೈಕ್, ಲಾಂಗ್, ಮಚ್ಚು, ಡ್ರಾಗರ್, ಪೆಪ್ಪರ್ ಸ್ಪ್ರೇ, ಮಂಕಿ ಕ್ಯಾಂಪ್, ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
Advertisement
ಸಿನಿಮಾ ಪ್ರೇರಣೆ:
ಅಂದಹಾಗೆ ಈ ಖತರ್ನಾಕ್ ಗ್ಯಾಂಗ್ ನ ಲೀಡರ್ ಯೋಗಾನಂದ್, ಕಳೆದ 5 ತಿಂಗಳ ಹಿಂದೆ ತಮಿಳಿನ ಅರ್ಜುನ್ ಸರ್ಜಾ ಹಾಗೂ ವಿಶಾಲ್ ನಟನೆಯ ಇರುಂಬು ತಿರೈ ಸಿನಿಮಾವನ್ನ ವೀಕ್ಷಣೆ ಮಾಡಿದ್ದನು. ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ಮೊಬೈಲ್ ಬಳಕೆ ಮಾಡದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಪರಿಯನ್ನ ಕಂಡು ತಾನೂ ಕೂಡಾ ಮೊಬೈಲ್ ಬಳಕೆ ಮಾಡೋದನ್ನ ಬಿಟ್ಟಿದ್ದನು.
Advertisement
ದರೋಡೆಗೆ ಕದ್ದ ಕಾರಿನ ನಂಬರ್ ಪ್ಲೇಟ್, ನಂಬರ್ ಗಳನ್ನ ಬದಲಿಸಿ ದರೋಡೆಗೆ ಇಳಿಯುತ್ತಿದ್ದರು. ಹಿಂದೊಮ್ಮೆ ಮಾರುತಿ ಓಮ್ನಿ ಕಾರನ್ನು ಕದ್ದು ದರೋಡೆ ಮಾಡಿ ಬಳಿಕ ಕಾರನ್ನ ಸುಟ್ಟು ಹಾಕಿದ್ದಾರೆ. ಡಿಸೆಂಬರ್ 3ರಂದು ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ನುಗ್ಗಿದ್ದ ಈ ಗ್ಯಾಂಗ್ ಬಂಕ್ 82 ಸಾವಿರ ನಗದು ದೋಚಿ ಅಲ್ಲಿದ್ದವರಿಗೆ ಪೆಪ್ಪರ್ ಸ್ಪ್ರೇ ಮಾಡಿ, ಸಿಸಿಕ್ಯಾಮೆರಾದ ಡಿವಿಆರ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ರಾಮನಗರ ಎಸ್‍ಪಿ ಬಿ. ರಮೇಶ್ ಹೇಳಿದ್ದಾರೆ.
ಬಂಧಿತರ ವಿಚಾರಣೆ ವೇಳೆ ರಾಜ್ಯದ ವಿವಿಧೆಡೆ ನಡೆಸಿದ್ದ ಪೆಟ್ರೋಲ್ ಬಂಕ್ ಗಳ 12 ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ವೊಂದರ ದರೋಡೆಗೆ ಸ್ಕೆಚ್ ಕೂಡ ಹಾಕಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv