ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಕನಿಷ್ಠ ಏಳರಿಂದ ಎಂಟು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದಾನೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ (Swati Maliwal) ಗಂಭೀರ ಆರೋಪ ಮಾಡಿದ್ದಾರೆ.
ಹಲ್ಲೆ ನಡೆಸಿದ ಸಂಬಂಧ ಸ್ವಾತಿ ಮಲಿವಾಲ್ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಎಳೆ ಎಳೆಯಾಗಿ ಸ್ವಾತಿ ದೂರಿನಲ್ಲಿ ವಿವರಿಸಿದ್ದಾರೆ.
ಮೇ 13 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಮನೆಯ ಡ್ರಾಯಿಂಗ್ ರೂಮ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಮಯದಲ್ಲಿ ಕೇಜ್ರಿವಾಲ್ ನಿವಾಸದಲ್ಲಿ ಇದ್ದರು ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮಾಜಿ ಮುಖ್ಯಸ್ಥೆ ಸ್ವಾತಿ ಆರೋಪಿಸಿದ್ದಾರೆ. ಎಫ್‍ಐಆರ್‍ನಲ್ಲಿ ಕೇಜ್ರಿವಾಲ್ ಹೆಸರನ್ನು ಉಲ್ಲೇಖಿಸಿಲ್ಲ.
ಎಫ್‍ಐಆರ್ ನಲ್ಲಿ ಏನಿದೆ?: ಕೇಜ್ರಿವಾಲ್ ಅವರ ವೈಯಕ್ತಿಕ ಸಹಾಯಕ ಬಿಭವ್ ಕುಮಾರ್ (Bibhav Kumar) ನನಗೆ 7-8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ನಾನು ಎಷ್ಟೇ ಮನವಿ ಮಾಡಿಕೊಂಡರೂ ಪದೇ ಪದೇ ನನ್ನ ಹೊಟ್ಟೆ ಮತ್ತು ಸೊಂಟಕ್ಕೆ ಒದ್ದಿದ್ದಾನೆ. ಇದನ್ನೂ ಓದಿ: ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ – ಕೇಜ್ರಿವಾಲ್ ಆಪ್ತನ ವಿರುದ್ಧ FIR
ನಾನು ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದಾಗ ಬಿಭವ್ ಕುಮಾರ್ ಒಳಗೆ ಬಂದಿದ್ದಾನೆ. ಬಳಿಕ ಕಾರಣವಿಲ್ಲದೇ ನನ್ನ ವಿರುದ್ಧ ಕಿರುಚಾಡಲು ಹಾಗೂ ನಿಂದಿಸಲು ಪ್ರಾರಂಭಿಸಿದ್ದಾನೆ. ನೀವು ನಮ್ಮ ಮಾತನ್ನು ಯಾಕೆ ಕೇಳುವುದಿಲ್ಲ? ಕೆಟ್ಟ ಮಹಿಳೆ, ನಾವು ನಿಮಗೆ ಪಾಠ ಕಲಿಸುತ್ತೇವೆ ಎಂದೆಲ್ಲಾ ಬಾಯಿಗೆ ಬಂದಂತೆ ಬೈದಿದ್ದಾನೆ. ಇದಾದ ಬಳಿಕ ಭಯಾನಕ ದೌರ್ಜನ್ಯಗಳು ಪ್ರಾರಂಭವಾದವು.
ಕುಮಾರ್ ಅವರು ನನಗೆ 7-8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಆಗ ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾದೆ. ಕೂಡಲೇ ಸಹಾಯಕ್ಕಾಗಿ ಅಂಗಲಾಚಿದ್ದೇನೆ. ಈ ವೇಳೆ ಅವರು ನನ್ನ ಬಟ್ಟೆಯನ್ನು ಹಿಡಿದು ಎಳೆದುಕೊಂಡು ಹೋಗಿ ನನ್ನ ತಲೆಯನ್ನು ಮೇಜಿಗೆ ಹೊಡೆದಿದ್ದಾನೆ. ಈ ವೇಳೆ ನಾನು ಕೆಳಗೆ ಬಿದ್ದೆ. ನಾನು ಸಹಾಯಕ್ಕಾಗಿ ನಿರಂತರವಾಗಿ ಕಿರುಚಾಡಿದರೂ ಯಾರೊಬ್ಬರು ನನ್ನ ರಕ್ಷಣೆಗೆ ಬರಲಿಲ್ಲ.
ನಾನು ಪದೇ ಪದೇ ಕಿರುಚಾಡಿದ್ರೂ ಬಿಭವ್ ನನ್ನ ಮೇಲೆ ಹಲ್ಲೆ ಮಾಡುವುದನ್ನು ಬಿಡಲಿಲ್ಲ. ನನ್ನ ಎದೆ, ಹೊಟ್ಟೆ ಹಾಗೂ ಸೊಂಟಕ್ಕೆ ಪದೇ ಪದೇ ಒದ್ದಿದ್ದಾನೆ. ನನ್ನ ಬಿಟ್ಟುಬಿಡುವಂತೆ ಅಂಗಲಾಚಿದ್ರೂ ಆತ ಕರುಣೆ ತೋರಲಿಲ್ಲ, ಪಶ್ಚಾತ್ತಾಪಡಲಿಲ್ಲ, ಬದಲಾಗಿ ನನ್ನ ಮೇಲೆ ದಾಳಿ ಮುದುವರಿಸಿದ್ದಾನೆ ಎಂದು ಮಲಿವಾಲ್ ದೂರಿನಲ್ಲಿ ಆರೋಪಿಸಿದ್ದಾರೆ.