ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ರಾಂಧವ. ಯಾರೇ ಆದರೂ ಮೊದಲ ಹೆಜ್ಜೆಯಲ್ಲಿಯೇ ನಿರ್ವಹಿಸಲು ಹಿಂದೇಟು ಹಾಕುವಂಥಾ ಪಾತ್ರಗಳೊಂದಿಗೇ ಭುವನ್ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಸುನಿಲ್ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಮೂರು ಶೇಡ್‍ಗಳ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಪಾತ್ರಗಳಿಗೆ ಅವರು ರೆಡಿಯಾದ ರೀತಿಯೇ ಒಂದು ಮಜವಾದ ಕಥೆ.
ಹಾಗಂತ ಭುವನ್ ಹೀಗೆ ಇಂಥಾ ಪಾತ್ರಗಳಿಗೆ ಅಣಿಗೊಂಡಿದ್ದರ ಹಿಂದೆ ಬರೀ ಚೇತೋಹಾರಿ ಅನುಭವಗಳು ಮಾತ್ರವೇ ಇಲ್ಲ. ಅಲ್ಲಿ ಸಂಕಟದ, ಮನೋವ್ಯಾಕುಲದ ಅನುಭವಗಳೂ ದಂಡಿಯಾಗಿವೆ. ಇಂಥಾ ಒಂದಷ್ಟು ಅನುಭವಗಳನ್ನು ಖುದ್ದು ಭುವನ್ ಹಂಚಿಕೊಂಡಿದ್ದಾರೆ. ರಾಂಧವದಲ್ಲಿ ಭುವನ್ ಪಾತ್ರಕ್ಕೆ ಒಟ್ಟು ಮೂರು ಶೇಡುಗಳಿವೆ. ಅದರಲ್ಲಿ ರಾಬರ್ಟ್, ರಾಜ ರಾಂಧವ ಮತ್ತು ರಾಣಾ ಎಂಬ ಶೇಡುಗಳಿಗೆ ಭುವನ್ ತಿಂಗಳ ಕಾಲ ರೆಡಿಯಾಗಿದ್ದಾರೆ.
ಅದರಲ್ಲಿಯೂ ರಾಬರ್ಟ್ ಪಾತ್ರ ಭುವನ್ ನಿಜವಾದ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ. ರಾಬರ್ಟ್ ಪಕ್ಷಿ ಶಾಸ್ತ್ರಜ್ಞ. ಆತ ಮಾತಾಡೋದೇ ಕಡಿಮೆ. ಎಲ್ಲ ಭಾವನೆಗಳನ್ನೂ ಕೂಡಾ ಎಕ್ಸ್ ಪ್ರೆಷನ್ ಮೂಲಕವೇ ತೋರಿಸಿ ಮೌನವಾಗಿರೋದು ಆ ಪಾತ್ರದ ವಿಶೇಷತೆ. ಅದನ್ನು ಸೀದಾ ಸೆಟ್ಟಿಗೆ ಹೋಗಿ ನಿರ್ವಹಿಸೋದು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕೆಂಬುದು ಭುವನ್‍ಗೆ ಮನವರಿಕೆಯಾಗಿತ್ತು. ಆದ್ದರಿಂದಲೇ ಮೌನವನ್ನು ಮನನ ಮಾಡಿಕೊಳ್ಳಲು ತಿಂಗಳುಗಳ ಕಾಲ ಏಕಾಂತದಲ್ಲಿರಲು ಅವರು ನಿರ್ಧರಿಸಿದ್ದರು.
ಇದರನ್ವಯ ಮನೆಯೊಳಗೆ ಬಂಧಿಯಾದ ಭುವನ್ ಮೂರೂವರೆ ತಿಂಗಳ ಕಾಲ ಹೊರಗೇ ಬಂದಿರಲಿಲ್ಲ. ಹೆಚ್ಚಾಗಿ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಅಡುಗೆ ಮಾಡಿ ಹಾಕುವವರೊಬ್ಬರು ಬಿಟ್ಟರೆ ಬೇರ್ಯಾರೂ ಅವರ ಸಂಪರ್ಕದಲ್ಲಿರಲಿಲ್ಲ. ಪ್ರತೀ ದಿನ ಗೆಳೆಯರೊಂದಿಗೆ ಕಲೆತು ಖುಷಿಗೊಳ್ಳುತ್ತಿದ್ದ ಭುವನ್‍ಗೆ ಮೂರೂವರೆ ತಿಂಗಳಾಗೋ ಹೊತ್ತಿಗೆಲ್ಲ ಹುಚ್ಚು ಹಿಡಿಯುವಂಥಾ ಪರಿಸ್ಥಿತಿ ಬಂದೊದಗಿತ್ತು. ಆದರೆ ಹಾಗೆ ಹೊರ ಬರೋ ಹೊತ್ತಿಗೆಲ್ಲ ಭುವನ್ ರಾಬರ್ಟ್ ಪಾತ್ರವಾಗಿ ಬದಲಾಗಿದ್ದರಂತೆ. ಇಂಥಾ ತಯಾರಿಯೊಂದಿಗೇ ರಾಬರ್ಟ್ ಪಾತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ.