ಭೋಪಾಲ್: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಧ್ಯ ಪ್ರದೇಶದ ಇಬ್ಬರು ಸರ್ಕಾರಿ ವೈದ್ಯರು ತಮ್ಮ ಕಾರುಗಳಲ್ಲೇ ವಾಸಿಸುತ್ತಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನ ಒಂದೇ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಸಚಿನ್ ನಾಯಕ್ ಮತ್ತು ಸಚಿನ್ ಪಟಿದಾರ್ ಇಬ್ಬರೂ ತಮ್ಮ ಕಾರುಗಳಲ್ಲಿ ಒಂದು ವಾರದಿಂದ ವಾಸಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ತಮ್ಮ ಕುಟುಂಬವನ್ನು ರಕ್ಷಿಸಲು ತಮ್ಮನ್ನು ತಾವೇ ಕಾರಿನಲ್ಲಿ ನಿರ್ಬಂಧಿಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಅವರ ದಿನದ ಶಿಫ್ಟ್ ಮುಗಿದ ನಂತರ, ಅವರು ಸ್ವಲ್ಪ ಸಮಯದವರೆಗೆ ತಮ್ಮ ಮನೆಗಳ ಬಳಿ ಬಂದು ದೂರದಿಂದಲೇ ತಮ್ಮ ಕುಟುಂಬಸ್ಥರನ್ನು ಮಾತನಾಡಿಸುತ್ತಾರೆ ನಂತರ ತಮ್ಮ ಕಾರಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಜೊತೆಗೆ ಅಲ್ಲೇ ಮಲಗುತ್ತಾರೆ. ಬಿಡುವಿನ ವೇಳೆಯಲ್ಲಿ ಕಾರಿನಲ್ಲೇ ಕುಳಿತುಕೊಂಡು ಪುಸ್ತಕ ಓದುತ್ತಾರೆ. ಇದರ ಜೊತೆ ಬೇಜಾರದಾಗ ಕುಟುಂಬದೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಾರೆ. ಕಾರಿನಲ್ಲಿ ಬೆಡ್‍ಶೀಟ್‍ಗಳು, ಬಟ್ಟೆ, ಲ್ಯಾಪ್‍ಟಾಪ್ ಮತ್ತು ಹಾಸಿಗೆ ಎಲ್ಲವನ್ನು ಇಟ್ಟುಕೊಂಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಕೊರೊನಾ ವೈರಸ್ ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುವ ವೈದ್ಯ ಸಚಿನ್ ನಾಯಕ್, ಈ ಸಾಂಕ್ರಾಮಿಕ ರೋಗ ಬಹುಬೇಗ ಹರಡಿತು. ಹೀಗಾಗಿ ರಾಜ್ಯದ ಆಡಳಿತ ವರ್ಗಕ್ಕಾಗಲಿ ಅಥವಾ ನಮಗಾಗಲಿ ಇದರ ವಿರುದ್ಧದ ಹೋರಾಟಕ್ಕೆ ತಯಾರಾಗಲು ಸಮಯವಿರಲಿಲ್ಲ. ಹಾಗಾಗಿ ನಮ್ಮವರನ್ನು ರಕ್ಷಿಸಿಕೊಳ್ಳುವುದು ನಮ್ಮ ಕೆಲಸ. ನಾವು ಕೊರೊನಾ ಮಾದರಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಇದರಿಂದ ರೋಗ ಹರಡಬಹುದು. ಆದ್ದರಿಂದ ನಾವು ಕಾರಿನಲ್ಲಿ ವಾಸಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮೊತ್ತೊಬ್ಬ ವೈದ್ಯರಾದ ಸಚಿನ್ ಪಟಿದಾರ್ ಅವರು ಅರಿವಳಿಕೆ ತಜ್ಞರಾಗಿದ್ದಾರೆ. ಅವರು ಕೂಡ ಮಾರ್ಚ್ 31ರಿಂದ ಕಾರಿನಲ್ಲೇ ವಾಸಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ ಕಾರಿನಲ್ಲಿ ಸೋಪ್, ಡಿಯೋಡರೆಂಟ್ ಬಾಚಣಿಗೆ ಮತ್ತು ಶೇವಿಂಗ್ ಕಿಟ್ ಇದೆ. ಮಲಗಲು ಕಾರಿನ ಹಿಂಬದಿಯ ಸೀಟಿನಲ್ಲಿ ಹಾಸಿಗೆಯೂ ಇದೆ. ಆದರೆ ನನಗೆ ನನ್ನ ಕುಟುಂಬದ ಹಿರಿಯ ಜೀವಗಳ ಬಗ್ಗೆ ಚಿಂತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ವೈದ್ಯರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ 359 ಕೊರೊನಾ ಸೋಂಕಿತರ ಪತ್ತೆಯಾಗಿದ್ದು, ಸುಮಾರು 26 ಜನರು ಸಾವನ್ನಪ್ಪಿದ್ದಾರೆ.