ಮಂಗಳೂರು: ಭೂತ ಕೋಲದ ವೇಳೆ ತೆಂಗಿನ ಮರದಿಂದ ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದೈವ ಪಾತ್ರಿಯೊಬ್ಬರು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಸುಮೇಶ್(40) ಮೃತಪಟ್ಟ ದೈವ ಪಾತ್ರಿ. ಕೇರಳದ ಕಣ್ಣೂರು ಜಿಲ್ಲೆಯ ಅಳಿಕೋಡಿ ಎಂಬಲ್ಲಿ ಫೆಬ್ರವರಿ 21ರ ಮುಂಜಾನೆ ಈ ದುರ್ಘಟನೆ ಸಂಭವಿಸಿತ್ತು.
ಆಗಿದ್ದೇನು? ಕೇರಳದಲ್ಲಿ ಬಪ್ಪರ್ಯನ್ ಭೂತ ಕೋಲದ ಸಂಪ್ರದಾಯದಂತೆ ತೆಂಗಿನ ಮರಕ್ಕೆ ಏರಿ ನರ್ತನ ಮಾಡುವ ಪದ್ದತಿ ಇದೆ. ದೈವ ಪಾತ್ರಿ ಸುಮೇಶ್, ತೆಂಗಿನ ಮರ ಏರಿ ನರ್ತನ ಮಾಡುವ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಸುಮೇಶ್ ನೇರವಾಗಿ ತೆಂಗಿನ ಮರ ಕೆಳಗೆ ಹಾಕಲಾಗಿದ್ದ ಬೆಂಕಿಯ ಕುಂಡಕ್ಕೆ ಬಿದ್ದಿದ್ದು, ಕೂಡಲೇ ಅವರನ್ನು ಕಣ್ಣೂರಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಮೇಶ್ ಇಂದು ಸಾವನ್ನಪ್ಪಿದ್ದಾರೆ.
ತೆಂಗಿನ ಮರದಿಂದ ದೈವ ಪಾತ್ರಿ ಬಿದ್ದು ಮೃತಪಡುವ ಎರಡನೇ ಪ್ರಕರಣ ಇದಾಗಿದೆ. ಇಲ್ಲಿ ಪಾತ್ರಧಾರಿ ತೆಂಗಿನ ಮರದಿಂದ ಬೀಳುತ್ತಿರುವ ವಿಡಿಯೋ ಮತ್ತು ಈ ಭೂತಕೋಲ ಹೇಗೆ ನಡೆಯುತ್ತದೆ ಎಂದು ತೋರಿಸುವ ಮತ್ತೊಂದು ವಿಡಿಯೋವನ್ನು ನೀಡಲಾಗಿದೆ.