ಪೊಲೀಸ್ ತನಿಖೆಯಲ್ಲಿ ನಗರ ನಕ್ಸಲರ ಜೊತೆ ಕಾಂಗ್ರೆಸ್ ನಂಟು ರಿವೀಲ್!

Public TV
2 Min Read
congres naxal e1535801004265

ನವದೆಹಲಿ: ಭೀಮಾ ಕೋರೆಂಗಾವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಬಹಿರಂಗವಾಗುತ್ತಿದ್ದು ನಗರ ನಕ್ಸಲರ ಜೊತೆ ಕಾಂಗ್ರೆಸ್ಸಿನ ಇಬ್ಬರು ಹಿರಿಯ ಪ್ರಭಾವಿ ನಾಯಕರು ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

ಸಿಪಿಎಂ(ಮಾವೋ) ನಾಯಕರ ಜೊತೆ ಮುಂಬೈ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ಸಿನ ನಾಯಕರು ಮಾತುಕತೆ ನಡೆಸಿದ್ದು, ಈ ವೇಳೆ ಕಾನೂನು ಮತ್ತು ಹಣಕಾಸಿನ ನೆರವು ನೀಡಲು ಸಿದ್ಧ ಎಂದು ತಿಳಿಸಿದ್ದಾರೆ ಎಂಬುದಾಗಿ ಪೊಲೀಸ್ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಮಾವೋ ನಾಯಕರ ಜೊತೆಗಿನ ಮಾತುಕತೆಯ ವೇಳೆ ನಾಯಕರು ನಾವು ಮಾತನಾಡುತ್ತಿರುವ ವಿಚಾರ ಗೌಪ್ಯವಾಗಿರಬೇಕೆಂದು ಪ್ರಾಕ್ಸಿ ಫೋನ್ ನಂಬರ್ ಮೂಲಕ ವ್ಯವಹರಿಸುತ್ತಿದ್ದರು. ಈ ಸಂವಹನದ ವೇಳೆ ಕೇಂದ್ರ ಸರ್ಕಾರದ ವಿರುದ್ಧ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸಂಪರ್ಕದಲ್ಲಿದ್ದ ನಾಯಕರು ಯಾರು ಎನ್ನುವುದು ತಿಳಿದು ಬಂದಿಲ್ಲ. ಈಗ ಗೃಹಬಂಧನಲ್ಲಿರುವ ವ್ಯಕ್ತಿಗಳನ್ನು ನಮ್ಮ ಕಸ್ಟಡಿಗೆ ಪಡೆದು ಬಳಿಕ ಈ ನಾಯಕರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲು ಪೊಲೀಸರು ಮುಂದಾಗಲಿದ್ದಾರೆ ಎಂದು ವರದಿ ತಿಳಿಸಿದೆ.

ಪುಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪರಮ್‍ವೀರ್ ಸಿಂಗ್ ಅವರು, ಕ್ರಾಂತಿಕಾರಿ ಲೇಖಕ ಪಿ.ವರವರ ರಾವ್ ಸೇರಿದಂತೆ ಐವರು ಪ್ರಧಾನಿ ಮೋದಿ ಅವರನ್ನು ಕೊನೆಗೊಳಿಸಲು ನಿರ್ಧರಿಸಿದ್ದರು. ಅದಕ್ಕೆ ರಾಜೀವ್ ಗಾಂಧಿ ಹತ್ಯೆ ಮಾದರಿಯನ್ನು ಅನುಸರಿಸಲು ಮುಂದಾಗಿದ್ದರು ಎಂದು ತಿಳಿಸಿದ್ದರು.

ಸಂಚಿಗೆ ಸಂಬಂಧಿಸಿದಂತೆ ಈಗಾಗಲೇ ಬಂಧಿತನಾಗಿರುವ ರೋನಾ ವಿಲ್ಸನ್ ಈ ಅಂಶವನ್ನು ಇ-ಮೇಲ್ ಮೂಲಕ ಮಾವೋವಾದಿ ನಾಯಕನಿಗೆ ತಿಳಿಸಿದ್ದ. ಭೀಮ ಕೋರೆಗಾಂವ್ ಹಿಂಸಾಚಾರ ಮತ್ತು ಇತರ ಸಂಚುಗಳ ಬಗ್ಗೆ ಸಾವಿರಾರು ಪುಟಗಳ ದಾಖಲೆಗಳು ಸಿಕ್ಕಿದ್ದು, ಅದರಲ್ಲಿ ಅವರ ಯೋಜನೆಗಳನ್ನು ವಿವರಿಸಲಾಗಿದೆ ಎಂದು ಸಿಂಗ್ ವಿವರಿಸಿದ್ದರು.

ನಿಷೇಧಿತ ಮಾವೋವಾದಿ ಸಂಘಟನೆಗಳು ಮ್ಯಾನ್ಮಾರ್ ನಲ್ಲಿ ಸಭೆ ನಡೆಸಿತ್ತು. ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳ ಜತೆಗೆ ಶಸ್ತ್ರಾಸ್ತ್ರ ಪಡೆಯುವುದು ಮತ್ತು ತರಬೇತಿ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ಅಂಶ ಜೂನ್‍ನಲ್ಲಿ ರೋನಾ ವಿಲ್ಸನ್ ಮನೆಯಿಂದ ವಶಪಡಿಸಿಕೊಳ್ಳಲಾಗಿದ್ದ ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ಪುಣೆ ಪೊಲೀಸರು ಹೇಳಿದ್ದಾರೆ.

ನಿಷೇಧಿತ ಸಿಪಿಐ ಮಾವೋವಾದಿ, ಮಣಿಪುರದ ಪೀಪಲ್ಸ್ ಲಿಬರೇಷನ್ ಆರ್ಮಿ ಮತ್ತು ಕಾಶ್ಮೀರದ ವಿವಿಧ ಸಂಘಟನೆಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ ಎಂದು ಝೀ ನ್ಯೂಸ್ ವರದಿ ಮಾಡಿದೆ.

ಸಭೆಯಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ ಶಸ್ತ್ರಾಸ್ತ್ರ, ಆಯುಧಗಳ ಪೂರೈಕೆ ಮತ್ತು ತರಬೇತಿಯನ್ನು ಸಿಪಿಐ ಮಾವೋವಾದಿಗಳಿಗೆ ನೀಡಲು ಒಪ್ಪಿಕೊಂಡಿದೆ. ಭಾರತ-ನೇಪಾಳ, ಭಾರತ-ಮ್ಯಾನ್ಮಾರ್ ಗಡಿಗಳ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವುದಕ್ಕೆ ಇರುವ ಮೂರು ಕಳ್ಳ ದಾರಿಗಳನ್ನೂ ಗುರುತಿಸಲಾಗಿದೆ ಎಂದು ವಾಹಿನಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

modi vara vara rao

Share This Article
Leave a Comment

Leave a Reply

Your email address will not be published. Required fields are marked *