ಉಡುಪಿ: ಕರಾವಳಿಯಲ್ಲಿ ಪೌರತ್ವದ ಕಿಚ್ಚು ಆರುವ ಲಕ್ಷಣಗಳೇ ಕಾಣುತ್ತಿಲ್ಲ. ಎನ್ಆರ್ಸಿ, ಸಿಎಎ ವಿರುದ್ಧ ಮತ್ತು ಪರ ಪ್ರತಿಭಟನಾ ಸಭೆಗಳು ಖಾಯಾಂ ಆಗಿವೆ. ಈ ನಡುವೆ ಉಡುಪಿಯಲ್ಲಿ ಎನ್ಆರ್ಸಿ, ಸಿಎಎ ಹೋರಾಟಕ್ಕೆ ಇಂದು ಭೀಮ್ ಆರ್ಮಿಯ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಅಲಿಯಾಸ್ ರಾವಣ್ ಎಂಟ್ರಿ ಕೊಡುತ್ತಿದ್ದಾರೆ.
ಹೌದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬಹುಚರ್ಚಿತ ಕಾಯ್ದೆ ಸಿಎಎ. ಕಾಯ್ದೆ ಜಾರಿಯಾದ ದಿನದಿಂದ ದೇಶಾದ್ಯಂತ ಪೌರತ್ವದ ಕಿಚ್ಚು ಹತ್ತಿಕೊಂಡಿದೆ. ಮುಸಲ್ಮಾನ ಸಂಘಟನೆಗಳು , ಪ್ರಗತಿಪರರು, ದಲಿತ ಸಮಿತಿಗಳ ಹಿಂದೆ ಕಾಂಗ್ರೆಸ್ ನಿಂತು ಪ್ರತಿಭಟಿಸುತ್ತಿದೆ. ರಾಜ್ಯದಲ್ಲಿ ಈ ಬಗ್ಗೆ ಅತಿ ಹೆಚ್ಚು ಪ್ರತಿಭಟನೆ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಇದೀಗ ಮತ್ತೆ ಉಡುಪಿಯಲ್ಲಿ ಸಿಎಎ ವಿರುದ್ಧ ಇಂದು ಜನಾಕ್ರೋಶ ವ್ಯಕ್ತವಾಗಲಿದೆ. ಭೀಮ್ ಆರ್ಮಿ ಹೋರಾಟದ ನಾಯಕ ಚಂದ್ರಶೇಖರ್ ಆಜಾದ್ ಅಲಿಯಾಸ್ ರಾವಣ್ ಉಡುಪಿಗೆ ಬರುತ್ತಿದ್ದಾರೆ. ಉಡುಪಿ ನಗರದ ಕ್ರಿಶ್ಚನ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Advertisement
Advertisement
ಮುಸ್ಲಿಂ ಒಕ್ಕೂಟ ಮುಖಂಡ ಯಾಸಿನ್ ಮಲ್ಪೆ ಮಾತನಾಡಿ, ದೇಶದ ಜನರ ಭಾವನೆಯನ್ನು ನುಚ್ಚುನೂರು ಮಾಡಿರುವ ಸಿಎಎ ನಮಗೆ ಬೇಡ ಎಂದು ಒತ್ತಾಯಿಸುವ ಸಮಾವೇಶ ಇದು. ಎಲ್ಲಾ ಜಾತಿ, ಎಲ್ಲಾ ಧರ್ಮದ ಜನ ಪಕ್ಷ ಬೇಧ ಬದಿಗಿಟ್ಟು ಬರಲಿದ್ದಾರೆ ಎಂದರು.
Advertisement
ಸಿಐಎ ಕಾನೂನನ್ನು ವಿರೋಧಿಸಿ ಸುಮಾರು ಇಪ್ಪತ್ತೈದು ಸಾವಿರ ಮಂದಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಸಹಬಾಳ್ವೆ ಸಂಘಟನೆ ಪ್ರತಿಭಟನಾ ಸಭೆಯ ಜವಾಬ್ದಾರಿ ಹೊತ್ತಿದ್ದು, ಸಮಾನ ಮನಸ್ಕ ಸಂಘಟನೆಗಳು ಕೈ ಜೋಡಿಸಿದೆ. ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎರಡು ಎಸ್‍ಪಿ, ಎರಡು ಕೆಎಸ್‌ಆರ್‌ಪಿ, ನಾಲ್ಕು ಡಿಎಆರ್ ಸೇರಿದಂತೆ ಉಡುಪಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೆರವಣಿಗೆಗೆ ಪೊಲೀಸರು ಪರವಾನಗಿ ಕೊಟ್ಟಿಲ್ಲ.
Advertisement
ಪಬ್ಲಿಕ್ ಟಿವಿ ಜೊತೆ ಎಎಸ್‍ಪಿ ಕುಮಾರ ಚಂದ್ರ ಮಾತನಾಡಿ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಸಿದ್ದೇವೆ. ಹೊರ ಜಿಲ್ಲೆಯ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುತ್ತೇವೆ. ಮೆರವಣಿಗೆ ಮಾಡಲು ಪರವಾನಗಿ ಕೊಟ್ಟಿಲ್ಲ ಎಂದು ತಿಳಿಸಿದರು.
ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ವಿವಾದಾತ್ಮಕ ಭಾಷಣಕ್ಕೆ ಪ್ರಸಿದ್ಧಿ ಹೊಂದಿದವರು. ನೂರಾರು ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡು ಜೈಲಿಗೆ ಹೋದವರು. ಆಜಾದ್ ಮಾತು ಕೇಳಲು ಪ್ರತಿಭಟನಾಕಾರರು ಕಾತರರಾಗಿದ್ದರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಧಾನ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಸಮಾವೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ಅವಕಾಶ ಕೊಟ್ಟಿಲ್ಲ ಎಂಬುದು ಬಹುಚರ್ಚೆಗೀಡಾಗಿತ್ತು. ಹೀಗಾಗಿ ಉಡುಪಿಯ ಸಮಾವೇಶಕ್ಕೆ ಮುಸ್ಲಿಂ ಮಹಿಳೆಯರನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಹಲವಾರು ವಿಚಾರಗಳಿಂದ ಉಡುಪಿಯ ಸಿಎಎ ವಿರುದ್ಧದ ಹೋರಾಟ ಕುತೂಹಲದ ಕೇಂದ್ರ ಬಿಂದುವಾಗಿದೆ.