ಬೆಳಗಾವಿ: ಇತ್ತೀಚೆಗೆ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಮೇಲೆ ಕಂಡಲ್ಲಿ ಗುಂಡಿಕ್ಕಿ ಎಂದು ಹೇಳುತ್ತಾರೆ. ಗಡಿ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿ ಮಾಡಿದ ಎಂಇಎಸ್‍ಗೆ ಗುಂಡಿಕ್ಕಿ ಎಂದು ಹೇಳಿಕೆ ನೀಡಲಿಲ್ಲ ಯಾಕೆ ಎಂದು ಕರ್ನಾಟಕ ನವನಿರ್ಮಾಣ ಸೇನೆ(ಕನಸೆ) ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಕಳೆದ 64 ವರ್ಷದಿಂದ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಬೆಳಗಾವಿಯಲ್ಲಿ ಎಂಇಎಸ್‍ನವರು ಸಾಕಷ್ಟು ಆಸ್ತಿ ಹಾನಿ ಮಾಡಿದ್ದಾರೆ. ಅವರಿಗೆ ಕಂಡಲ್ಲಿ ಗುಂಡಿಕ್ಕಿ ಎಂದು ಯಾಕೆ ಹೇಳಲಿಲ್ಲ. ಎಲ್ಲಿಂದಲೋ ಬಂದವರಿಗೆ ಗುಂಡಿಕ್ಕಿ ಅಂತಾರೆ. ಗಡಿ ವಿಚಾರದಲ್ಲಿ ಕುತಂತ್ರ ಬುದ್ಧಿ ತೋರುವ ಎಂಇಎಸ್ ಅವರಿಗೆ ಗುಂಡಿಕ್ಕಿ ಎನ್ನುವುದಿಲ್ಲ ಏಕೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿಗೆ ಸವಾಲ್ ಹಾಕಿದರು.
Advertisement
Advertisement
ಬೆಳಗಾವಿ ಗಡಿ ವಿವಾದದ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪಿಒಕೆಗೆ ಹೋಲಿಸಿದ್ದು ಖಂಡನೀಯ. ಮಹಾರಾಷ್ಟ್ರ ಸಿಎಂಗೆ ತಿಳುವಳಿಕೆ ಇಲ್ಲ. ಪಾಕಿಸ್ತಾನ ಹಾಗೂ ಕಾಶ್ಮೀರ ಗಡಿ ವಿವಾದಕ್ಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಲಿಸುವ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು. ಕರ್ನಾಟಕದ ಸಿಎಂ ಮಹಾರಾಷ್ಟ್ರದ ಸಿಎಂಗೆ ದಿಟ್ಟ ಉತ್ತರ ನೀಡದಿರುವುದು ದುರ್ದೈವದ ಸಂಗತಿ. ರಾಮಕೃಷ್ಣ ಹೆಗಡೆ ಬಿಟ್ಟರೆ ಗಡಿ ವಿಚಾರವಾಗಿ ಯಾವುದೇ ಸರ್ಕಾರ ಮುಂದಾಗದೇ ಇರುವುದು ವಿಪರ್ಯಾಸದ ಸಂಗತಿ ಎಂದರು.
Advertisement
ಮಹಾರಾಷ್ಟ್ರದ ಸರ್ಕಾರ ಗಡಿ ವಿಚಾರವಾಗಿ ಒಗ್ಗಟ್ಟಾಗುತ್ತಾರೆ. ಆದರೆ ಕರ್ನಾಟಕದ ಬೆಳಗಾವಿ ಜನಪ್ರತಿನಿಧಿಗಳು ಎಂಇಎಸ್‍ನ ಮತ ಬ್ಯಾಂಕ್‍ಗಾಗಿ ಬಳಸಿಕೊಳ್ಳುತ್ತಿರುವುದು ನಾಚಿಗೆಗೇಡಿನ ಸಂಗತಿ. ಗಡಿ ಬಗ್ಗೆ ಕಳಕಳಿ ಇರುವ ಜನರನ್ನು ಬೆಳಗಾವಿ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು. ಬೆಂಗಳೂರಿನಲ್ಲಿ ಇರುವ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಬೆಳಗಾವಿಗೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.
Advertisement
ಮಹಾ ಸಿಎಂ ಉದ್ಧವ್ ಠಾಕ್ರೆ ಕನ್ನಡ ಮತ್ತು ಮರಾಠಿಗರ ಭಾಷೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ತಂದೆಗೆ ತಕ್ಕ ಪಾಠ ಕಲಿಸಿದವರು ಕನ್ನಡಿಗರು ಉದ್ಧವ್‍ಗೆ ಬಿಡುತ್ತೇವಾ ಎಂದು ಖಡಕ್ ಎಚ್ಚರಿಕೆ ನೀಡಿದರು.
ಮಹದಾಯಿ ಹೋರಾಟ ನಿರಂತರವಾಗಿ ನಾಲ್ಕು ವರ್ಷದಿಂದ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೂ ಮಹದಾಯಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಮಹದಾಯಿ ಯೋಜನೆಯನ್ನು ಒಂದು ವಾರದಲ್ಲಿ ಅನುಷ್ಠಾನಗೊಳಿಸದಿದ್ದರೆ ಎಲ್ಲಾ ಲೋಕಸಭಾ ಸದಸ್ಯರ ಮನೆಯ ನಲ್ಲಿ ನೀರು ಕಡಿತ ಮಾಡಲಾಗುವುದು ಎಂದರು. ಈ ಸುದ್ದಿಗೋಷ್ಠಿಯಲ್ಲಿ ಕನಸೆ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಆನಂದ ಆಡ್ಡೆ, ಸುಷ್ಮಾ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.