ನಿರ್ದೇಶಕ ಯೋಗರಾಜ್ ಭಟ್ ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ನಾನಾ ಕಾರಣಗಳಿಂದಾಗಿ ಆ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸಿತ್ತು. ಭಟ್ಟರ ಡಿಸೈನ್ ಮತ್ತು ಅದರಲ್ಲಿ ಬರೆಯಲಾದ ಅಕ್ಷರಗಳು ಇಂಟ್ರಸ್ಟಿಂಗ್ ಆಗಿದ್ದರಿಂದ ಫಸ್ಟ್ ಲುಕ್ ವೈರಲ್ ಆಗಿದೆ. ಸಿಲೆಬ್ರಿಟಿಗಳು ಸೇರಿದಂತೆ ಅನೇಕರು ಆ ಪೋಸ್ಟರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗುತ್ತಿರುವ, ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ಹೊಸ ಸಿನಿಮಾಗೆ ವಿಚಿತ್ರವಾಗಿರುವಂಥ ಶೀರ್ಷಿಕೆ ಇಡಲಾಗಿದೆ. ಈವರೆಗೂ ಟೈಟಲ್ ವಿಷಯದಲ್ಲಿ ಉಪೇಂದ್ರ ಮಾತ್ರ ತಲೆಕೆಡಿಸುತ್ತಿದ್ದರು. ಇದೀಗ ಆ ಸಾಲಿಗೆ ಯೋಗರಾಜ್ ಭಟ್ಟರು ಕೂಡ ಸೇರ್ಪಡೆಗೊಂಡಿದ್ದಾರೆ. ತಮ್ಮ ಹೊಸ ಸಿನಿಮಾಗೆ ತಲೆಯಲ್ಲಿ ಹುಳು ಬಿಡುವಂತಹ ಟೈಟಲ್ ಇಟ್ಟಿದ್ದಾರೆ. ಟೈಟಲ್ ನೋಡಿದವರು, ಏನ್ ಗುರು ಇದರ ಅರ್ಥ ಎಂದು ಕೇಳುವಂತಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಈ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಪ್ರಭುದೇವ್ ಮತ್ತು ಶಿವರಾಜ್ ಕುಮಾರ್ ಪಾಲ್ಗೊಂಡಿದ್ದಾರೆ. ಶೂಟಿಂಗ್ ನಡುವೆಯೇ ಚಿತ್ರಕ್ಕೆ ‘K ಕರಟಕ D ದಮನಕ’ (Karataka Damanaka) ಎಂದು ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್
ಟೈಟಲ್ ಇಟ್ಟಾಗಿನಿಂದ ಈವರೆಗೂ ‘ಕರಟಕ ದಮನಕ’ ಎಂದರೇನು ಎನ್ನುವ ಕುರಿತು ಯೋಗರಾಜ್ ಭಟ್ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಈ ಕುರಿತು ಅವರು ಮೊದಲ ಬಾರಿಗೆ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದ್ದಾರೆ. ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಪೋಸ್ಟ್ ಮಾಡಿದ್ದಾರೆ.
ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivaraj Kumar) ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudev) ಅಭಿನಯಿಸುತ್ತಿರುವುದು ವಿಶೇಷ. ಈ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ.
Web Stories