ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್ಎಸ್ ನಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುತ್ತಿರುವುದರಿಂದ ಭರಚುಕ್ಕಿಗೆ ಮತ್ತೆ ಜೀವಕಳೆ ಬಂದಿದೆ.
ಕೇರಳದ ವೈನಾಡು ಹಾಗೂ ಕೊಡಗಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಕಬಿನಿ ಹಾಗೂ ಕೆಆರ್ಎಸ್ ನಿಂದ 12 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಭರಚುಕ್ಕಿಯಲ್ಲಿ ಕಾವೇರಿ ಅತ್ಯಂತ ವಿಶಾಲವಾಗಿ ಕವಲು ಕವಲಾಗಿ, ಧುಮ್ಮಿಕ್ಕಿ ಹರಿಯುತ್ತಿದ್ದಾಳೆ.
Advertisement
Advertisement
ಕಳೆದ ಹಲವಾರು ತಿಂಗಳಿಂದ ಬಣಗುತ್ತಿದ್ದ ಭರಚುಕ್ಕಿಗೆ ಮತ್ತೆ ಜೀವಕಳೆ ಬಂದಿದೆ. ಕಾವೇರಿ ಭರ್ರೆಂದು ಧುಮ್ಮಿಕ್ಕುವ ಭರಚುಕ್ಕಿ ಜಲಪಾತದ ಸೊಬಗು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಸುತ್ತಲು ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡಗಳು, ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ನದಿ. ನೋಡಲು ಎರಡು ಕಣ್ಣು ಸಾಲದು ಎಂದು ಬೆಂಗಳೂರಿನಿಂದ ಬಂದಿರುವ ಪ್ರವಾಸಿ ಕೀರ್ತಿ ಹೇಳಿದ್ದಾರೆ.
Advertisement
ಇಲ್ಲಿನ ಪ್ರಕೃತಿಯ ಸೊಬಗಂತು ಅತ್ಯಾದ್ಭುತ. ಹಸಿರು ಬೆಟ್ಟಗುಡ್ಡಗಳ ನಡುವೆ ಹಾಲ್ನೊರೆಯಂತೆ ಹರಿಯುವ ಕಾವೇರಿಯ ಐಸಿರಿ ನಯನ ಮನೋಹರವಾಗಿದೆ. ಈ ದೃಶ್ಯವೈಭವಕ್ಕೆ ಮನಸೋಲದ ಜನರೇ ಇಲ್ಲ ಎಂದು ಪ್ರವಾಸಿಗರಾದ ಸುಗುಣ ಮತ್ತು ಶಿವಕುಮಾರ್ ಹೇಳಿದರು.
Advertisement
ಕಾವೇರಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಭರಚುಕ್ಕಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಾ ಕಾವೇರಿಯ ಸೊಬಗನ್ನು ಇಮ್ಮಡಿಗೊಳಿಸಿವೆ.