ಕಳೆದ 10 ವರ್ಷಗಳಲ್ಲಿ ರಕ್ಷಣೆ ಹಾಗೂ ಕಾನೂನಿನ ವಿಷಯದಲ್ಲಿ ಮೋದಿ ಸರ್ಕಾರ ಬಹಳ ದೊಡ್ಡ ದೊಡ್ಡ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಪಿಸಿ ಕಾನೂನುಗಳನ್ನು ಬಿಎನ್‌ಎಸ್ ಜೊತೆ ಬದಲಾಯಿಸಿರುವ ಕೇಂದ್ರ ಈಗ ಕಾನೂನಿಗೆ ಸಂಬಂಧಪಟ್ಟಂತೆ ಮತ್ತೊಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ದೊಡ್ಡ ದೊಡ್ಡ ಅಕ್ರಮಗಳನ್ನು ಎಸಗಿ ವಿದೇಶದಲ್ಲಿ ತಲೆಮರೆಸಿಕೊಂಡವರನ್ನು ಬೇಟೆಯಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಅಂತರಾಷ್ಟ್ರೀಯ ಪೊಲೀಸರ ಜೊತೆ ಸಂಪರ್ಕ ಸಾಧಿಸುವ ʼಭಾರತ್ ಪೋಲ್ʼ ಎಂಬ ಪೋರ್ಟಲ್ ಅನ್ನು ಆರಂಭಿಸಿದೆ. ಹಾಗಿದ್ರೆ ಏನಿದು ಭಾರತ್ ಪೋಲ್? ಇದರ ಎಸಲ ಹೇಗೆ? ವಿದೇಶದಲ್ಲಿ ಅಡಗಿರುವವರನ್ನು ಕರೆತರುವಲ್ಲಿ ಇದರ ಪಾತ್ರ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಭಾರತ್ ಪೋಲ್ ಎಂದರೇನು?
ಭಾರತ್ ಪೋಲ್ ಎಂಬುದು ಹೆಸರೇ ಸೂಚಿಸಿದಂತೆ ಇಂಟರ್‌ಪೋಲ್‌ಗೆ ಸಂಬಂಧಿಸಿದ್ದಾಗಿದೆ.ಭಾರತ್‌ಪೋಲ್ ಪೋರ್ಟಲ್‌ಗೆ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಇದನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಭಿವೃದ್ಧಿಪಡಿಸಿದೆ. ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿಗಳ ನಡುವೆ ಸಂಪರ್ಕ ಸಾಧಿಸುವುದು ಇದೆ ಮುಖ್ಯ ಉದ್ದೇಶವಾಗಿದೆ. ಈ ಪೋರ್ಟಲ್ ಮೂಲಕ ಭಾರತದ ತನಿಖಾ ಸಂಸ್ಥೆಗಳು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳೊಂದಿಗೆ ಅಪರಾಧಿಗಳ ರಿಯಲ್ ಟೈಮ್ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ಭಾರತ್ ಪೋಲ್ ಕೂಡ ಇಂಟರ್‌ಪೋಲ್ ಮೂಲಕ ಕಾರ್ಯನಿರ್ವಹಿಸಲಿದ್ದು, ವಿಶ್ವದ 195 ರಾಷ್ಟ್ರಗಳು ಈ ಪೋರ್ಟಲ್ ಮೂಲಕ ಸಂಪರ್ಕಕ್ಕೆ ಸಿಗುತ್ತದೆ.
Advertisement
Advertisement
Advertisement
ಭಾರತ್ ಪೋಲ್ ಜಾರಿಗೆ ಬಂದಿದ್ದೇಕೆ?
ಸೈಬರ್ ಅಪರಾಧ, ಹಣಕಾಸು ವಂಚನೆ, ಮಾನವ ಕಳ್ಳಸಾಗಣೆ, ಡ್ರಗ್ ಟ್ರಾಫಿಕಿಂಗ್ ಮತ್ತು ಸಂಘಟಿತ ಅಪರಾಧಗಳಂತಹ ಕ್ರೈಮ್‌ಗಳು ಹೆಚ್ಚುತ್ತಿರೋ ಸಮಯದಲ್ಲಿ ಭಾರತ್ ಪೋಲ್ ಪೋರ್ಟಲ್ ಅನುಷ್ಠಾನಕ್ಕೆ ಬಂದಿದೆ. ಈ ಅಪರಾಧಗಳು ಅನೇಕ ದೇಶಗಳನ್ನು ವ್ಯಾಪಿಸಿದ್ದು, ಅಪರಾಧಿಗಳನ್ನು ಹಿಡಿಯಲು ಜಾಗತಿಕ ಸಹಕಾರ ಅಗತ್ಯವಾಗಿ ಬೇಕಿದೆ. ಅದರಲ್ಲೂ ಭಾರತ ಈ ರೀತಿಯ ಅಪರಾಧಗಳಿಗೆ ಈಗೀಗ ಹೆಚ್ಚು ಗುರಿಯಾಗುತ್ತಿರುವುದರಿಂದ ಅಂತಾರಾಷ್ಟ್ರೀಯ ಸಹಕಾರ ಅಗತ್ಯ ಇದೆ. ಈ ಹಿನ್ನೆಲೆ ಭಾರತ್‌ಪೋಲ್ ಅನ್ನು ಜಾರಿಗೆ ತರಲಾಗಿದ್ದು, ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಹಾಗೂ ಭಾರತೀಯ ತನಿಖಾ ಸಂಸ್ಥೆಗಳ ನಡುವೆ ಸೇತುವೆಯಾಗಿ ಈ ಪೋರ್ಟಲ್ ಕೆಲಸ ಮಾಡಲಿದೆ.
Advertisement
ಕಾರ್ಯನಿರ್ವಹಣೆ ಹೇಗೆ?
ಅಪರಾಧಿಗಳು ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡರೇ ಅಲ್ಲಿನ ಪೊಲೀಸರ ಸಹಾಯದೊಂದಿಗೆ ಅವರನ್ನು ಬಂಧಿಸಬಹುದು. ಆದರೆ ದೊಡ್ಡ ದೊಡ್ಡ ಕ್ರಿಮಿನಲ್‌ಗಳು ಅಪರಾಧವೆಸಗಿ ವಿದೇಶದಲ್ಲಿ ತಲೆಮರೆಸಿಕೊಂಡರೇ ನೇರವಾಗಿ ಹೋಗಿ ಬಂಧಿಸಲು ನಮ್ಮ ಪೊಲೀಸರಿಗೆ ಅವಕಾಶವಿಲ್ಲ. ಆಗ ಕೇಂದ್ರೀಯ ಸಂಸ್ಥೆಗಳ ಸಹಾಯ ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ.
ಈ ಹಿಂದೆ ಇಂಟರ್‌ಪೋಲ್ ಜೊತೆ ಸಂಪರ್ಕ ಸಾಧಿಸಬೇಕು ಎಂದರೆ ಆ ಕೇಸ್ ಸಿಬಿಐಗೆ ವರ್ಗವಾಗಿ ಸಿಬಿಐ ಇಂಟರ್‌ಪೋಲ್ ಅನ್ನು ಸಂಪರ್ಕಿಸಬೇಕಿತ್ತು. ಆದರೆ, ಈಗ ಭಾರತ್‌ಪೋಲ್ ಪೋರ್ಟಲ್ ಅಕ್ಸೆಸ್ ಅನ್ನು ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶದ ಪೊಲೀಸರು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಲಾಗಿದ್ದು, ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಿಂದ ನೇರವಾಗಿ ಅಂತಾರಾಷ್ಟ್ರೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಸಲ್ಲಿಸಬಹುದಾಗಿದೆ. ಇದು ಅತ್ಯಂತ ವೇಗ ಹಾಗೂ ನೇರವಾಗಿರಲಿದೆ ಎಂದು ಹೇಳಲಾಗುತ್ತಿದೆ. ತಪ್ಪೆಸಗಿ ದೇಶ ಬಿಟ್ಟು ಪರಾರಿಯಾದವರ ಬಗ್ಗೆ ಇಂಟರ್‌ಪೋಲ್ ಬಳಿ ನೇರವಾಗಿ ಮಾಹಿತಿಯನ್ನು ದೇಶದ ಯಾವುದೇ ಪೊಲೀಸರು ನೇರವಾಗಿ ಪಡೆಯಬಹುದಾಗಿದೆ.
5 ಹಂತದಲ್ಲಿ ಕಾರ್ಯನಿರ್ವಹಣೆ:
ಭಾರತ್ ಪೋಲ್ ಪ್ರಮುಖವಾಗಿ 5 ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಮೊದಲಿಗೆ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಗಳ ಜೊತೆ ಸಂಪರ್ಕವನ್ನು ಸಾಧಿಸುತ್ತದೆ. ಬಳಿಕ ಇಂಟರ್‌ಪೋಲ್‌ನ ನೋಟಿಸ್‌ಗಳ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚುತ್ತದೆ. ನಂತರ ಅಪರಾಧಿಗಳ ಉಲ್ಲೇಖಗಳನ್ನು ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಬಳಿಕ ಅಪರಾದಿಗಳ ಬಗ್ಗೆ ಮಾಹಿತಿಯನ್ನು ಹಂಚುತ್ತದೆ. ಕೊನೆಯಲ್ಲಿ ತನ್ನ ಬಳಿ ಇರುವ ಸಂಪನ್ಮೂಲಗಳನ್ನು ಬಳಸಿ ಅಪರಾಧಿಗಳನ್ನು ಸೆರೆಹಿಡಿಯುತ್ತದೆ.
ರೆಡ್ ನೋಟಿಸ್ ನೀಡಲು ಸುಲಭ:
ಇನ್ನು, ಭಾರತ್‌ಪೋಲ್‌ನಿಂದ ಉಂಟಾಗುವ ಮಹತ್ವದ ಪ್ರಯೋಜನವೆಂದರೆ ಅಪರಾಧಿಗಳಿಗೆ, ತಲೆ ಮರೆಸಿಕೊಂಡವರಿಗೆ ನೀಡಲಾಗುತ್ತಿದ್ದ ರೆಡ್ ನೋಟಿಸ್‌ನಂತಹ ಇಂಟರ್‌ನ್ಯಾಷನಲ್ ನೋಟಿಸ್‌ಗಳನ್ನು ನೇರವಾಗಿಯೇ ನೀಡಬಹುದಾಗಿದೆ. ಈ ಮೂಲಕ ಸದಸ್ಯ ರಾಷ್ಟ್ರಗಳಿಗೆ ಕ್ರಿಮಿನಲ್‌ಗಳ ಬಗ್ಗೆ ಎಚ್ಚರಿಕೆಯನ್ನು ವೇಗವಾಗಿ ನೀಡಬಹುದು. ಇದರಿಂದ ಅಪರಾಧಿಗಳು ಪೊಲೀಸರಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗಲಿದೆ. ಇಷ್ಟು ದಿನ ಪತ್ರ, ಫ್ಯಾಕ್ಸ್ ಮತ್ತು ಇಮೇಲ್ ಮೂಲಕ ಈ ನೋಟಿಸ್‌ಗಳನ್ನು ನೀಡಲಾಗುತ್ತಿತ್ತು, ಇದರಿಂದ ಆ ನೋಟಿಸ್‌ಗಳು ಕಾರ್ಯರೂಪಕ್ಕೆ ಬರುವುದು ಬಹಳಷ್ಟು ತಡವಾಗುತ್ತಿತ್ತು. ಇದನ್ನೇ ಅಪರಾಧಿಗಳು ಕೂಡ ಅಡ್ವಾಂಟೇಜ್ ಆಗಿ ಮಾಡಿಕೊಂಡಿದ್ದರು. ಆದರೆ, ಈಗ ಅಪರಾಧಿಗಳಿಗೆ ಭಾರತ್‌ಪೋಲ್ ಪೋರ್ಟಲ್ ಕಂಟಕವಾಗಿದೆ.
ಅದರಲ್ಲೂ ಈ ಪೋರ್ಟಲ್‌ಗೆ ಸ್ಥಳೀಯ ಮಟ್ಟದ ಪೊಲೀಸರಿಗೂ ಅಕ್ಸೆಸ್ ನೀಡಲು ಭಾರತ ಸರ್ಕಾರ ಮುಂದಾಗಿದೆ. ಇದು ಪೊಲೀಸರಿಗೆ ಭಾರೀ ಅನುಕೂಲ ಮಾಡಿಕೊಡಲಿದ್ದು, ಇಷ್ಟು ದಿನ ಇಂಟರ್‌ಪೋಲ್‌ನಲ್ಲಿ ಮಾಹಿತಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪಲಿದ್ದು, ವಿಚಾರಣೆ ವೇಗ ಪಡೆಯಲಿದೆ. ಇನ್ನು, 2021ರಿಂದ ಭಾರತ ಇಂಟರ್‌ಪೋಲ್ ಸಹಕಾರದೊಂದಿಗೆ 100ಕ್ಕೂ ಅಪರಾಧಿಗಳನ್ನು ಹೆಡೆಮುರಿ ಕಟ್ಟಿ ದೇಶಕ್ಕೆ ಕರೆದುಕೊಂಡು ಬಂದಿದೆ. 2024ರಲ್ಲಿಯೇ 26 ಕ್ರಿಮಿನಲ್‌ಗಳನ್ನು ಭಾರತಕ್ಕೆ ಕರೆದುಕೊಂಡು ಬರಲಾಗಿದ್ದು, ಭಾರತ್‌ಪೋಲ್ ಬಂದ ಬಳಿಕ ಈ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುವ ಸಾಧ್ಯತೆ ಇದೆ.
ಹೇಗಿದೆ ಸಿಬಿಐನ ಭಾರತ್ ಪೋಲ್?
ಏಕೀಕೃತ ವ್ಯವಸ್ಥೆ: ಈ ವ್ಯವಸ್ಥೆ ಇಂಟರ್‌ಪೋಲ್‌ನೊಂದಿಗೆ ಸಿಬಿಐ ರೀತಿಯಲ್ಲಿ ಸಂಪರ್ಕವನ್ನು ಏರ್ಪಡಿಸಿಕೊಡುತ್ತದೆ. ಭಾರತದ ಎಲ್ಲಾ ಕಾನೂನು ಜಾರಿ ಅಧಿಕಾರಿಗಳು, ಪೊಲೀಸ್ ಕಮಿಷನರ್ಗಳು ಮತ್ತು ಪೊಲೀಸ್ ಸೂಪರಿಟೆಂಡೆಂಟ್‌ಗಳನ್ನು ಸಂಯೋಜಿಸುತ್ತದೆ.
ಸರಳಿಕೃತ ವಿನಂತಿ: ಅಪರಾಧಿಗಳನ್ನು ಹುಡುಕಲು 195 ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುತ್ತಿರುವ ಟೆಂಪ್ಲೇಟ್‌ಗಳನ್ನು ಬಳಕೆ ಮಾಡಿಕೊಂಡು ಸುಲಭವಾಗಿ ಮತ್ತು ತ್ವರಿತವಾಗಿ ಅಂತಾರಾಷ್ಟ್ರೀಯ ಸಹಕಾರ ಕೋರಲು ಇದು ಸಹಾಯ ಮಾಡುತ್ತದೆ.
ಕ್ಷಿಪ್ರ ಮಾಹಿತಿ ಪ್ರಸರಣ: ಇಂಟರ್‌ಪೋಲ್‌ಗೆ ಅನುಮತಿ ನೀಡಿರುವ ಎಲ್ಲಾ 195 ದೇಶಗಳ ಗುಪ್ತಚರ ಮಾಹಿತಿಯನ್ನು ಭಾರತದ ತನಿಖಾ ಸಂಸ್ಥೆಗಳಿಗೆ ಭಾರತ್ ಪೋಲ್ ಅತ್ಯಂತ ವೇಗವಾಗಿ ಒದಗಿಸುತ್ತದೆ. ಇದರಿಂದ ತನಿಖೆಯ ವೇಗ ಹೆಚ್ಚಾಗಲಿದೆ.
ನೋಟಿಸ್ ನೀಡುವುದು ಸುಲಭ: ಅಂತಾರಾಷ್ಟ್ರೀಯವಾಗಿ ತಲೆ ಮರೆಸಿಕೊಂಡಿರುವ ಅಪರಾಧಿಗಳಿಗೆ ನೋಟಿಸ್ ತಲುಪಿಸುವುದು ಈಗ ಸುಲಭವಾಗಲಿದೆ. ಈ ಪೋರ್ಟಲ್‌ನಲ್ಲಿ ಅಪ್ಲೋಡ್ ಆಗುವಂತಹ ಮಾಹಿತಿಗಳು ಅಂತಾರಾಷ್ಟ್ರೀಯ ಪೊಲೀಸರಿಗೆ ಸುಲಭವಾಗಿ ಲಭ್ಯವಾಗಲಿದೆ.
ಸಾಮರ್ಥ್ಯ ಹೆಚ್ಚಳ: ಈ ಭಾರತ್ ಪೋಲ್ ಪೋರ್ಟಲ್‌ನಲ್ಲಿ ಕ್ಷಿಪ್ರವಾಗಿ ಮಾಹಿತಿಗಳು ಲಭ್ಯವಾಗುವ ಕಾರಣ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕೇಡಿಗಳನ್ನು ಹುಡುಕುವ ಅಧಿಕಾರ ಸಾಮರ್ಥ್ಯ ಹೆಚ್ಚುತ್ತದೆ. ವಿದೇಶದಲ್ಲಿ ತನಿಖೆ ನಡೆಸಲು ಇದು ಅನುವು ಮಾಡಿಕೊಡುತ್ತದೆ.
ಇಂಟರ್ ಪೋಲ್ ಬಗ್ಗೆ ಒಂದಿಷ್ಟು:
ಇಂಟರ್ ಪೋಲ್ ಎಂಬುದು ಜಾಗತಿಕ ಕ್ರಮಿನಲ್ ಪೊಲೀಸ್ ಸಂಸ್ಥೆಯಾಗಿದೆ. ಇದನ್ನು ಅಂತಾರಾಷ್ಟ್ರೀಯ ಪೊಲೀಸ್ ಠಾಣೆ ಎಂದೂ ಕರೆಯಲಾಗುತ್ತದೆ. ಈ ಸಂಸ್ಥೆಗೆ 195 ರಾಷ್ಟ್ರಗಳು ತಮ್ಮಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ. ಇದರ ಪ್ರಧಾನ ಕಚೇರಿ ಫ್ರಾನ್ಸ್‌ನ ಲಿಯಾನ್‌ನಲ್ಲಿದೆ. ಪ್ರಪಂಚದಲ್ಲಿ 7 ಬ್ಯೂರೋಗಳನ್ನು ಹೊಂದಿರುವ ಇಂಟರ್ ಪೋಲ್‌ಗೆ 1949ರಿಂದಲೂ ಭಾರತ ಸದಸ್ಯ ರಾಷ್ಟ್ರ. ಆಯಾ ದೇಶದ ಪ್ರಮುಖ ತನಿಖಾ ಸಂಸ್ಥೆಗಳ ಜೊತೆ ಸೇರಿ ಇದು ಕಾರ್ಯಾಚರಣೆ ನಡೆಸುತ್ತದೆ. ಪ್ರತಿ ದೇಶದಿಂದಲೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಇಂಟರ್ ಪೋಲ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಂತಾರಾಷ್ಟ್ರೀಯವಾಗಿ ಅಪರಾಧವನ್ನು ಹತ್ತಿಕ್ಕುವ ಕೆಲಸವನ್ನು ಇದು ಮಾಡುತ್ತದೆ.