ಮೈಸೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಹೊರವಲಯದ ವಿಷ್ಣು ಸ್ಮಾರಕ ಸ್ಥಳದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು.
ಸ್ಮಾರಕ ಸ್ಥಳದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಹತ್ತು ವರ್ಷಗಳ ನಂತರ ಒಳ್ಳೆಯದಾಗುತ್ತಿದೆ. ಇನ್ನೊಂದು ವಾರದಲ್ಲಿ ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
Advertisement
Advertisement
ವಿಷ್ಣು ನಿಧನರಾಗಿ ಹತ್ತು ವರ್ಷಗಳಾಗಿವೆ. ಅಭಿಮಾನಿಗಳ ಪ್ರೀತಿ, ವಿಶ್ವಾಸ ಇನ್ನು ಕಡಿಮೆಯಾಗಿಲ್ಲ. ಅವರ ಘನತೆಗೆ ಯಾವುದೇ ಧಕ್ಕೆಯಾಗಿಲ್ಲ. ವಿಷ್ಣು ಇನ್ನೂ ನಮ್ಮೊಂದಿಗೆ ಇದ್ದಾರೆ. ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಬೇಕು ಎಂಬುದು ಅವರ ಬಯಕೆಯಾಗಿತ್ತು. ಕಟ್ಟಡದ ರೂಪುರೇಷೆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದರು. ಸಿಎಂ ಯಡಿಯೂರಪ್ಪ ಅವರು ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.