ಉಡುಪಿ: ಪೊಲೀಸ್ ಎಸ್‍ಪಿ ಕಚೇರಿಯ ಮುಂದೆಯೇ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೊಡೆದಾಟಕ್ಕೆ ಇಳಿದಿದ್ದರು. ಮನವೊಲಿಸಿ ಚದುರಿಸಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗದೇ ಇದ್ದಾಗ ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಉಡುಪಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ ನಿಲ್ಲಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು. ಪರಿಸ್ಥಿತಿ ಕೈಮೀರಿದ್ದರೆ ಯಾರು ಜವಾಬ್ದಾರಿ ಹೊರುತ್ತಿದ್ದರು? ಆದ್ದರಿಂದಲೇ ಕಠಿಣ ಕ್ರಮಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರು ಘಟನೆಯಲ್ಲಿ ಗಾಯಗೊಂಡ ಮಂದಿಯನ್ನು ಭೇಟಿಯಾಗಿ, ಬಂಧನ ಪ್ರಕ್ರಿಯೆ ಮಾಡಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಎಸ್‍ಪಿ ಭೇಟಿ ಕೊಟ್ಟಿದ್ದರು. ಈ ಪ್ರಕರಣದಲ್ಲಿ ಈಗಾಗಲೇ 10 ಮಂದಿಯನ್ನು ಬಂಧಿಸಲಾಗಿದ್ದು, 10 ಮಂದಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ತನಿಖೆ ನಡೆಸಲು ಡಿವೈಎಸ್‍ಪಿ ಬೆಳ್ಳಿಯಪ್ಪಗೆ ಜವಾಬ್ದಾರಿ ನೀಡಲಾಗಿದೆ. ಗಲಭೆ ವಿಡಿಯೋ ಆಧರಿಸಿ ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.
ಘಟನೆ ವೇಳೆ ಎರಡೂ ಪಕ್ಷದವರನ್ನು ಮನವೊಲಿಸಿದರೂ ಎರಡು ಕಡೆಯ ಉದ್ರಿಕ್ತ ಗುಂಪು ಹತೋಟಿಗೆ ಬರಲಿಲ್ಲ. ಪರಿಸ್ಥಿತಿ ಕೈಮೀರಿದಾಗ ಲಾಠಿಚಾರ್ಜ್ ಮಾಡಿದ್ದೇವೆ. ಪ್ರತಿಭಟನೆ ವಿಪರೀತಕ್ಕೆ ಹೋಗಲು ಕಾರಣ ಏನು ಎಂಬುವುದರ ಬಗ್ಗೆ ತನಿಖೆ ಮಾಡಲಾಗುವುದು ಎಂದು ವಿವರಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv