– ಜ.1 ರಿಂದ ದೆಹಲಿಯಲ್ಲಿ ಆರಂಭ
– ಮುಂದೆ 20 ಮಹಾನಗರಗಳಲ್ಲಿ ಜಾರಿ
ನವದೆಹಲಿ: ಓಲಾ, ಉಬರ್ ಆಪ್‌ನಂತೆ (Cab App) ಕಾರ್ಯನಿರ್ವಹಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಹಕಾರಿ ಟ್ಯಾಕ್ಸಿ ಸೇವೆ ಭಾರತ್ ಟ್ಯಾಕ್ಸಿ (Bharat Taxi) ಜನವರಿಯಿಂದ ಆರಂಭವಾಗಲಿದೆ.
ಹೌದು. ಜನವರಿ 1 ರಿಂದ ದೆಹಲಿಯಲ್ಲಿ (Delhi) ಈ ಸೇವೆ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಈ ಟ್ಯಾಕ್ಸಿ ಸೇವೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಶೂನ್ಯ ಕಮಿಷನ್ ಮಾದರಿಯ ಈ ಅಪ್ಲಿಕೇಶನ್ ಅನ್ನು ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ನಿರ್ವಹಣೆ ಮಾಡಲಿದೆ.
ಕಾರುಗಳು, ಆಟೋ ರಿಕ್ಷಾಗಳು ಮತ್ತು ಬೈಕ್ ಎಲ್ಲಾ ಸೇವೆಯೂ ಇದರಲ್ಲಿ ಲಭ್ಯ ಇರಲಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಆಪ್‌ನಲ್ಲಿ ಬಿಡುಗಡೆಯಾಗಲಿದ್ದು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬಹುದು.
ಅಪ್ಲಿಕೇಶನ್ ಬಳಕೆದಾರ ಸ್ನೇಹಿ ಮೊಬೈಲ್ ಬುಕ್ಕಿಂಗ್, ಪೀಕ್ ಅವಧಿಯಲ್ಲೂ ಒಂದೇ ದರ, ನೈಜ-ಸಮಯದ ವಾಹನ ಟ್ರ್ಯಾಕಿಂಗ್, ಬಹುಭಾಷಾ ಇಂಟರ್‌ಫೇಸ್ ಮತ್ತು 24×7 ಗ್ರಾಹಕ ಬೆಂಬಲದಂತಹ ವೈಶಿಷ್ಟ್ಯಗಳನ್ನು ನೀಡಲಿದೆ.
ಭಾರತ್ ಟ್ಯಾಕ್ಸಿ ಅಪ್ಲಿಕೇಶನ್ ಮಾದರಿಯು ಚಾಲಕ-ಮಾಲೀಕತ್ವದ ಸಹಕಾರಿ ವ್ಯವಸ್ಥೆಯನ್ನು ಆಧರಿಸಿದೆ. ಇದು ಚಾಲಕರಿಗೆ ಹೆಚ್ಚಿನ ಆದಾಯ ನೀಡಲಿದೆ. ಚಾಲಕರು ದರದ 80 ಪ್ರತಿಶತ ಹಣವನ್ನು ನೇರವಾಗಿ ಪಡೆಯುತ್ತಾರೆ. ಇದಕ್ಕಾಗಿ ಮಾಸಿಕ ಕ್ರೆಡಿಟ್ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾಲಿನ್ಯ ಹೆಚ್ಚಿರುವಾಗ ಟೋಲ್‌ಗಳಿಂದ ಆದಾಯ ಗಳಿಕೆಗೆ ಆದ್ಯತೆ ನೀಡೋದು ಅಸಾಧ್ಯ, ಸಂಗ್ರಹ ಸ್ಥಗಿತಗೊಳಿಸಿ: ಸುಪ್ರೀಂ

ಸರ್ಕಾರಿ ಮೂಲಗಳ ಪ್ರಕಾರ ಆರಂಭದಲ್ಲಿ 56,000 ಚಾಲಕರು ಭಾರತ್ ಟ್ಯಾಕ್ಸಿ ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಪರೀಕ್ಷೆ ಪೂರ್ಣಗೊಂಡಿದ್ದರೂ ಗುಜರಾತ್‌ನ ರಾಜ್‌ಕೋಟ್‌ನಲ್ಲಿಯೂ ಇದೇ ರೀತಿಯ ಪ್ರಯೋಗ ನಡೆಯುತ್ತಿದ್ದು ಅಲ್ಲಿ ಫೆ.1 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಮುಂದೆ ದೇಶದ 20 ಮಹಾನಗರಗಳಿಗೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ್ ಟ್ಯಾಕ್ಸಿ ಸೇವೆ ಜಾರಿಗೆ ಕಾರಣ ಏನು?
ಕಳೆದ ಕೆಲ ವರ್ಷಗಳಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳ ಪ್ರವಾಹವೇ ಹರಿದುಬಂದಿದೆ. ವಾಹನದ ಸ್ವಚ್ಛತೆ, ಕೆಲವೊಮ್ಮೆ ಹಠಾತ್ ದರ ಹೆಚ್ಚಳ, ಬುಕಿಂಗ್ ಕ್ಯಾನ್ಸಲ್‌ನಂತಹ ಸಮಸ್ಯೆಗಳ ಬಗ್ಗೆ ಜನ ದೂರು ನೀಡುತ್ತಲೇ ಬರುತ್ತಿದ್ದಾರೆ. ಇದರೊಂದಿಗೆ ಟ್ಯಾಕ್ಸಿ ಮಾಲೀಕರು ಅಥವಾ ಚಾಲಕರು ತಮ್ಮ ಗಳಿಕೆಯ ಸುಮಾರು 25% ಹಣವನ್ನು ಕಮಿಷನ್ ರೂಪದಲ್ಲಿ ಕಂಪನಿಗಳಿಗೆ ಪಾವತಿಸಬೇಕಾಗಿದೆ. ಹಾಗಾಗಿ ಗ್ರಾಹಕರು ಮತ್ತು, ಟ್ಯಾಕ್ಸಿ ಮಾಲೀಕರು ಇಬ್ಬರಿಗೂ ಆಗುತ್ತಿರುವ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಭಾರತ್ ಟ್ಯಾಕ್ಸಿಯ ರೂಪುರೇಷೆ ಹೇಗೆ?
ರಾಷ್ಟ್ರೀಯ ಇ-ಗವರ್ನೆನ್ಸ್ ಡಿವಿಷನ್ ಟ್ಯಾಕ್ಸಿ ಸೇವೆಗೆ ಅಗತ್ಯ ತಂತ್ರಾಂಶ ಹಾಗೂ ರೂಪುರೇಷೆಯನ್ನ ಅಭಿವೃದ್ಧಿಪಡಿಸಿದೆ. ಸಹಕಾರಿ ಸಂಸ್ಥೆಯಾದ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅನ್ನು ಸಹಕಾರಿ ಮುಖಂಡರು ಮತ್ತು ಚಾಲಕ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯು ನಿರ್ವಹಿಸುತ್ತದೆ. ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಅಧ್ಯಕ್ಷರಾಗಿದ್ದು, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ರೋಹಿತ್ ಗುಪ್ತಾ ಉಪಾಧ್ಯಕ್ಷರಾಗಿದ್ದಾರೆ. ಈ ಉಪಕ್ರಮವು IFFCO, ಅಮುಲ್, ನಬಾರ್ಡ್ ಮತ್ತು NCDC ಸೇರಿದಂತೆ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿದೆ.
ಅಮಿತ್ ಶಾ ಹೇಳಿದ್ದೇನು?
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸಹಕಾರಿ ಕ್ಯಾಬ್ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಓಲಾ, ಉಬರ್‌ಗೆ ಹೋಲುವ ಟ್ಯಾಕ್ಸಿ ಸೇವೆ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ತಿಳಿಸಿದ್ದರು. ಸಹಕಾರಿ ಟ್ಯಾಕ್ಸಿ ವೇದಿಕೆಯಿಂದ ಬರುವ ಲಾಭವು ಯಾವುದೇ ಶ್ರೀಮಂತ ವ್ಯಕ್ತಿಗೆ ಅಲ್ಲ, ಟ್ಯಾಕ್ಸಿ ಚಾಲಕರಿಗೆ ಹೋಗುತ್ತದೆ ಎಂದು ಅವರು ಹೇಳಿದ್ದರು.

