ಕ್ಯಾಬ್ ಬುಕ್ ಮಾಡಿದ ಮೇಲೆ ಡ್ರೈವರ್ (Driver) ಫೋನ್ ಮಾಡಿ ಎಲ್ಲಿಗೆ ಹೋಗ್ಬೇಕು? ಅಂತ ಕೇಳ್ತಾರೆ.. ನಂತರ ರೈಡ್ ಕ್ಯಾನ್ಸಲ್ ಮಾಡ್ತಾರೆ.. ಈ ಅನುಭವ ನಿಮಗೂ ಆಗಿದ್ಯಾ..? ಪೀಕ್ ಅವರ್‌ನಲ್ಲಿ ಆಕಾಶಕ್ಕೆ ಮುಟ್ಟುವಷ್ಟು ಬೆಲೆ ಏರಿಕೆಯಾಗಿ ತೊಂದರೆ ಅನುಭವಿಸಿದ್ದೀರಾ..? ಇನ್ನೂ ಕಮಿಷನ್ ಜಾಸ್ತಿ ತಗೋತಾರೆ, ನಮಗೆ ಕಡಿಮೆ ಕೊಡ್ತಾರೆ ಅಂತಾ ಚಾಲಕರ ಸಮಸ್ಯೆ ಕೇಳಿದೀರಾ..? ಇದಕ್ಕೆಲ್ಲ ಶೀಘ್ರವೇ ಬ್ರೇಕ್ ಬೀಳುತ್ತಿದೆ. ಕೇಂದ್ರ ಸರ್ಕಾರ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲು ಮುಂದಾಗಿದೆ. ಓಲಾ-ಊಬರ್‌ನಂತಹ ಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ಸವಾಲೊಡ್ಡಲು, ಚಾಲಕರು ಮತ್ತು ಪ್ರಯಾಣಿಕರಿಬ್ಬರಿಗೂ ಅನುಕೂಲವಾಗುವಂತಹ ವೇದಿಕೆ ತರುತ್ತಿದೆ.

ಹೌದು. ಸಂಚಾರ ಸುಗಮವಾಗಿಸಲು ಹಾಗೂ ಪ್ರಯಾಣಿಕರ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ನವೀನ ಉಪಕ್ರಮ ಜಾರಿಗೊಳಿಸಲಿದೆ, ಅದುವೇ ಭಾರತ್ ಟ್ಯಾಕ್ಸಿ. ಭಾರತ್ ಟ್ಯಾಕ್ಸಿ (Bharat Taxi) ಸರ್ಕಾರಿ ಬೆಂಬಲಿತ ಉಪಕ್ರಮವಾಗಿದ್ದು, ಇದನ್ನ ಕೇಂದ್ರ ಸಹಕಾರ ಸಚಿವಾಲಯ ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ (NeGD) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಟ್ಯಾಕ್ಸಿಗಳು ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಆಗಿ ಕಾರ್ಯನಿರ್ವಹಿಸಲಿದೆ. ದೆಹಲಿಯಲ್ಲಿ ಇದರ ಪೈಲಟ್ ಹಂತವನ್ನು (ಪ್ರಾಥಮಿಕ ಹಂತ) ನವೆಂಬರ್‌ನಲ್ಲಿ ಪ್ರಾರಂಭಿಸಲಾಗುತ್ತಿದ್ದು, ಮೊದಲು 650 ಟ್ಯಾಕ್ಸಿಗಳು ಪ್ರಾಯೋಗಿಕವಾಗಿ ರಸ್ತೆಗೆ ಇಳಿಯಲಿದೆ. ಡಿಸೆಂಬರ್‌ನಲ್ಲಿ ಸೇವೆಯನ್ನ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎಂದು NeGD ಮೂಲಗಳು ತಿಳಿಸಿವೆ.
ಈ ಯೋಜನೆಯು ಸರ್ಕಾರಿ ಸೇವೆಯನ್ನ ಸುಗಮಗೊಳಿಸುವುದರ ಜೊತೆಗೆ ಗಳಿಕೆಯ ಸಂಪೂರ್ಣ ಹಣ ಸಿಗುವಂತೆ ಮಾಡುತ್ತಾರೆ, ಒಂದರ್ಥದಲ್ಲಿ ಚಾಲಕರೇ ಮಾಲೀಕರಾಗಿರ್ತಾರೆ. ಹಾಗಾದ್ರೇ ಏನಿದು ಭಾರತ್ ಟ್ಯಾಕ್ಸಿ? ಇದರಿಂದ ಪ್ರಯಾಣಿಕರಿಗೆ, ಚಾಲಕರಿಗೆ ಆಗುವ ಲಾಭ ಏನು? ಖಾಸಗಿ ಕಂಪನಿಗಳ ಆ್ಯಪ್‌ಗಿಂತ ಇದು ಹೇಗೆ ಭಿನ್ನ? ಭಾರತ್ ಟ್ಯಾಕ್ಸಿ ಹಿಂದೆ ಇರುವ ಶಕ್ತಿ ಯಾವುದು ಎಂಬುದನ್ನು ತಿಳಿಯೋಣ ಬನ್ನಿ…

ಭಾರತ್ ಟ್ಯಾಕ್ಸಿ ಸೇವೆ ಅನುಷ್ಠಾನಕ್ಕೆ ಕಾರಣ ಏನು?
 ಕಳೆದ ಕೆಲ ವರ್ಷಗಳಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳ ಪ್ರವಾಹವೇ ಹರಿದುಬಂದಿದೆ. ವಾಹನದ ಸ್ವಚ್ಛತೆ, ಕೆಲವೊಮ್ಮೆ ಹಠಾತ್ ದರ ಹೆಚ್ಚಳ, ಬುಕಿಂಗ್ ಕ್ಯಾನ್ಸಲ್‌ನಂತಹ ಸಮಸ್ಯೆಗಳ ಬಗ್ಗೆ ಜನ ದೂರು ನೀಡುತ್ತಲೇ ಬರ್ತಿದ್ದಾರೆ. ಇದರೊಂದಿಗೆ ಟ್ಯಾಕ್ಸಿ ಮಾಲೀಕರು ಅಥವಾ ಚಾಲಕರು ತಮ್ಮ ಗಳಿಕೆಯ ಸುಮಾರು 25% ಹಣವನ್ನ ಕಮಿಷನ್ ರೂಪದಲ್ಲಿ ಕಂಪನಿಗಳಿಗೆ ಪಾವತಿಸಬೇಕಾಗಿದೆ. ಹಾಗಾಗಿ ಗ್ರಾಹಕರು ಮತ್ತು, ಟ್ಯಾಕ್ಸಿ ಮಾಲೀಕರು ಇಬ್ಬರಿಗೂ ಆಗುತ್ತಿರುವ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಚಾಲಕರಿಗೆ ಏನು ಲಾಭ?
 ಈಗಿನ ಆ್ಯಪ್ ಆಧರಿತ ಟ್ಯಾಕ್ಸಿಗಳು ಕಮಿಷನ್ ಪಾವತಿ ಮಾಡಬೇಕಿರುವುದರಿಂದ ಸಹಜವಾಗಿ ಪ್ರಯಾಣಿಕರ ಮೇಲೆ ಹೆಚ್ಚು ಚಾರ್ಜ್ ಮಾಡಲೇಬೇಕಿದೆ. ಆದರೆ ಭಾರತ್ ಟ್ಯಾಕ್ಸಿ ಕೇಂದ್ರ ಸರ್ಕಾರದ್ದಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಮಿಷನ್ ಪಾವತಿಸಬೇಕಿಲ್ಲ. ಪ್ರತಿ ಟಿಪ್‌ನ ಸಂಪೂರ್ಣ ಗಳಿಕೆಯನ್ನು ತಾವೇ ಪಡೆಯುತ್ತಾರೆ. ಅಲ್ಲದೇ ಅವರಿಗೆ ಸರ್ಕಾರಿ ಬೋನಸ್, ಡಿವಿಡೆಂಟ್‌ಗಳು ಕೂಡ ಸಿಗುತ್ತವೆ ಎನ್ನಲಾಗುತ್ತಿದೆ. ಸಾಧಾರಣ ಮೊತ್ತ ಪಾವತಿಸಿ ಆ್ಯಪ್ ಖರೀದಿ ಮಾಡಿದ್ರೆ ಮುಗೀತು. ಇದು ಚಾಲಕರು, ಪ್ರಯಾಣಿಕರು ಇಬ್ಬರಿಗೂ ಖುಷಿ ಕೊಡಲಿದೆ. ಏಕೆಂದ್ರೆ ಭಾರತ್ ಟ್ಯಾಕ್ಸಿ ಖಾಸಗಿ ಕಂಪನಿಯಾಗಿ ಅಲ್ಲ, ಸಹಕಾರಿ ಉದ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ʻಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್’ ನಿರ್ವಹಿಸುತ್ತದೆ. 2025ರ ನೂನ್‌ನಲ್ಲಿ ಈ ಉದ್ಯಮವನ್ನ 500 ಕೋಟಿ ಆರಂಭಿಕ ಬಂಡವಾಳದೊಂದಿಗೆ ಶುರು ಮಾಡಲಾಯಿತು.
ಇವರು ಚಾಲಕರಲ್ಲ ʻಸಾರಥಿʼಗಳು
 ಭಾರತ್ ಟ್ಯಾಕ್ಸಿಗಳು ರಸ್ತೆಗಳ ಮೇಲೆ ಸಂಚಾರ ಮಾಡಲು ಪ್ರಾರಂಭಿಸಿದ ನಂತರ ಈ ಟ್ಯಾಕ್ಸಿ ಚಾಲಕರನ್ನ ʻಸಾರಥಿʼ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಉಪಕ್ರಮದ ಪ್ರಾಯೋಗಿಕ ಹಂತವು ನವೆಂಬರ್ 2025ರಲ್ಲಿ ದೆಹಲಿಯಿಂದ ಶುರುವಾಗಲಿದೆ. ಪ್ರಾಥಮಿಕವಾಗಿ 650 ಟ್ಯಾಕ್ಸಿಗಳು ರಸ್ತೆಗೆ ಇಳಿಯಲಿದ್ದು, ಬಳಿಕ ದೇಶಾದ್ಯಂತ ವಿಸ್ತರಣೆಯಾಗುತ್ತವೆ. ಈ ಮೊದಲ ಹಂತದಲ್ಲಿ ಸುಮಾರು 5,000 ಚಾಲಕರು (ಮಹಿಳೆಯರು ಸೇರಿದಂತೆ) ಸೇರುವ ನಿರೀಕ್ಷೆಯಿದೆ.

2030ರ ವೇಳೆಗೆ ಭವಿಷ್ಯದ ಯೋಜನೆಗಳು ಹೇಗಿವೆ? 
 2026ರ ವೇಳೆಗೆ ಎಲ್ಲಾ ಪ್ರಮುಖ ಮೆಟ್ರೋ ನಗರಗಳಲ್ಲಿ ಭಾರತ್ ಟ್ಯಾಕ್ಸಿ ಸೇವೆ ಪ್ರಾರಂಭಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 2030ರ ವೇಳೆಗೆ ಈ ವೇದಿಕೆಯು ಜಿಲ್ಲಾ ಕೇಂದ್ರಗಳು ಹಾಗೂ ಗ್ರಾಮೀಣ ಭಾಗಗಳಿಗೂ ಎಂಟ್ರೊ ಕೊಡಲಿವೆ. ಈ ಮೂಲಕ 2030ರ ವೇಳೆಗೆ 1 ಲಕ್ಷ ಚಾಲಕರನ್ನ ಒಳಗೊಳ್ಳುವ ನಿರೀಕ್ಷೆ ಇಟ್ಟುಕೊಂಡಿದೆ.
ಡಿಜಿಟಲ್ ಏಕೀಕರಣ
 ಭಾರತ್ ಟ್ಯಾಕ್ಸಿ ವ್ಯವಸ್ಥೆಯಲ್ಲಿ ಯಾವುದೇ ದರ ಏರಿಕೆ ಇರುವುದಿಲ್ಲ. ಅಲ್ಲದೇ ಈ ಸೇವೆಯನ್ನ DG ಲಾಕರ್ ಮತ್ತು ಉಮಂಗ್‌ನಂತಹ ವೇದಿಕೆಗಳೊಂದಿಗೆ ಸಂಯೋಜಿಸಲಾಗಿದೆ. ಆದ್ದರಿಂದ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲೇ ಇರಲಿದೆ.

ಭಾರತ್ ಟ್ಯಾಕ್ಸಿಯ ರೂಪುರೇಷೆ ಹೇಗೆ?
 ರಾಷ್ಟ್ರೀಯ ಇ-ಗವರ್ನೆನ್ಸ್ ಡಿವಿಷನ್ ಟ್ಯಾಕ್ಸಿ ಸೇವೆಗೆ ಅಗತ್ಯ ತಂತ್ರಾಂಶ ಹಾಗೂ ರೂಪುರೇಷೆಯನ್ನ ಅಭಿವೃದ್ಧಿಪಡಿಸಿದೆ. ಸಹಕಾರಿ ಸಂಸ್ಥೆಯಾದ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅನ್ನು ಸಹಕಾರಿ ಮುಖಂಡರು ಮತ್ತು ಚಾಲಕ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯು ನಿರ್ವಹಿಸುತ್ತದೆ. ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಅಧ್ಯಕ್ಷರಾಗಿದ್ದು, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ರೋಹಿತ್ ಗುಪ್ತಾ ಉಪಾಧ್ಯಕ್ಷರಾಗಿದ್ದಾರೆ. ಈ ಉಪಕ್ರಮವು IFFCO, ಅಮುಲ್, ನಬಾರ್ಡ್ ಮತ್ತು NCDC ಸೇರಿದಂತೆ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿದೆ.
ಅಮಿತ್ ಶಾ ಹೇಳಿದ್ದೇನು?
 ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಸಹಕಾರಿ ಕ್ಯಾಬ್ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಓಲಾ, ಉಬರ್‌ಗೆ ಹೋಲುವ ಟ್ಯಾಕ್ಸಿ ಸೇವೆ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ತಿಳಿಸಿದ್ದರು. ಸಹಕಾರಿ ಟ್ಯಾಕ್ಸಿ ವೇದಿಕೆಯಿಂದ ಬರುವ ಲಾಭವು ಯಾವುದೇ ಶ್ರೀಮಂತ ವ್ಯಕ್ತಿಗೆ ಅಲ್ಲ, ಟ್ಯಾಕ್ಸಿ ಚಾಲಕರಿಗೇ ಹೋಗುತ್ತದೆ ಎಂದು ಅವರು ಹೇಳಿದ್ದರು. ಈಗ ಅದು ನಿಜವಾಗುತ್ತಿದೆ.
ಕೇಂದ್ರ ಸರ್ಕಾರದ ಈ ನೂತನ ಸೇವೆಯನ್ನು ವಿವಿಧ ಚಾಲಕ ಸಂಘಟನೆಗಳು ಸ್ವಾಗತಿಸಿವೆ. ಕರ್ನಾಟಕ ಚಾಲಕ ಸಂಘಟನೆಗಳಿಂದಲೂ ಖುಷಿ ವ್ಯಕ್ತವಾಗಿದೆ. ಕೇಂದ್ರದ ಈ ಯೋಜನೆಗೆ ಬೃಹತ್ ಬೆಂಗಳೂರು ಟ್ಯಾಕ್ಸಿ ಡ್ರೈವರ್ ಯೂನಿಯನ್ ಸ್ವಾಗತಿಸಿದೆ. ಹಲವಾರು ಚಾಲಕರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಕಡಿಮೆ ದರಕ್ಕೆ ಪ್ರಯಾಣಿಕರಿಗೆ ಸಿಗಲಿ, ಬೇಗ ಜಾರಿಯಾಗಲಿ. ಸರ್ಕಾರದ ವತಿಯಿಂದ ಟ್ಯಾಕ್ಸಿ ಓದಗಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿದೆ, ಇದ್ರಿಂದ ಚಾಲಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
 
 





