ನವದೆಹಲಿ: ಇಲ್ಲಿನ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋಗೆ ಭೇಟಿ ನೀಡಿದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ |(HD Kumaraswamy) ವಿವಿಧ ಅಟೋಮೊಬೈಲ್ ಮಳಿಗೆಗಳ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಒಂದೇ ಕಡೆಯಲ್ಲಿ ವಿನೂತನ ವಾಹನಗಳ ವಿಶ್ವರೂಪವನ್ನೇ ನೋಡುತ್ತಿದ್ದೇನೆ, ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಾಗಿರುವ ಹೊಸ ತಲೆಮಾರಿನ ವಾಹನಗಳನ್ನು ನೋಡಿ ಚಕಿನಾಗಿದ್ದೇನೆ ಎಂದು ಉದ್ಘಾರ ತೆಗೆದರು. ಜೊತೆಗೆ ಹೈಡ್ರೋಜನ್ ಇಂಧನ ತಂತ್ರಜ್ಞಾನದಿಂದ ತಯಾರಿಸಲಾಗಿರುವ ಟ್ರಕ್ ಅನ್ನು ವೀಕ್ಷಿಸಿ, ಆ ಟ್ರಕ್‌ನಲ್ಲಿ ಕೊಂಚ ದೂರ ಸಂಚರಿಸಿ ಅದರ ಕ್ಷಮತೆಯನ್ನು ಪರಿಶೀಲನೆ ಮಾಡಿದರು. ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಕೇಂದ್ರ ಸರ್ಕಾರ ಉಪಕ್ರಮವಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹೈಡ್ರೋಜನ್ ತಂತ್ರಜ್ಞಾನ ಆಧಾರಿತ ವಾಹನಗಳ ತಯಾರಿಕೆಗೆ ಹೆಚ್ಚು ಪ್ರೋತ್ಸಾಹ ಕೊಡಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ – ವಿಜಯೇಂದ್ರ ಆಗ್ರಹ
ಖಾಸಗಿ ಗಗನಯಾನ ಕಂಪನಿಯ ಮಳಿಗೆಯೊಂದಕ್ಕೆ ಭೇಟಿ ನೀಡಿ, ಎಲೆಕ್ಟ್ರಿಕ್ ಗಗನನೌಕೆ ಅಥವಾ ಹಾರುವ ಟ್ಯಾಕ್ಸಿಯನ್ನು ಕುತೂಹಲದಿಂದ ವೀಕ್ಷಿಸಿದರು. ದೂರದಿಂದಲೇ ಅದನ್ನು ಗಮನಿಸಿ, ಗಗನ ನೌಕೆಯ ಒಳಾಂಗಣವನ್ನು ಸೇರಿದಂತೆ ಗಗನನೌಕೆ ತಾಂತ್ರಿಕ ಅಂಶಗಳು, ಅದರ ಬಳಕೆ, ಉಪಯೋಗಗಳ ಬಗ್ಗೆ ನಿಪುಣರಿಂದ ಮಾಹಿತಿ ಪಡೆದುಕೊಂಡರು. ನಗರ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಿರುವ ಹಾರುವ ಟ್ಯಾಕ್ಸಿಯ ಅಭಿವೃದ್ಧಿಗೆ ಆ ಕಂಪನಿಯು 10 ದಶಲಕ್ಷ ಡಾಲರ್ ಮೊತ್ತವನ್ನು ಹೂಡಿಕೆ ಮಾಡಿದೆ. 2028ಕ್ಕೆ ಈ ಹಾರುವ ಟ್ಯಾಕ್ಸಿ ಸೇವೆ ಆರಂಭಿಸಲು ಕಂಪನಿ ನಿರ್ಧರಿಸಿದೆ ಎನ್ನುವ ಮಾಹಿತಿ ಪಡೆದುಕೊಂಡರು.
ಆಕರ್ಷಕ ಹಾರುವ ಟ್ಯಾಕ್ಸಿ ಜೊತೆಗೆ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಇವಿ ವಲಯದಲ್ಲಿ ಆಗಿರುವ ಪ್ರಗತಿಯನ್ನು ಅನಾವರಣಗೊಳಿಸಿತು. ಎಲೆಕ್ಟ್ರಿಕ್ ವಲಯದ ಪ್ರಮುಖ ತಯಾರಕರು ತಮ್ಮ ಇತ್ತೀಚಿನ ಇವಿ ವಾಹನಗಳ ಮಾದರಿಗಳನ್ನು ಸಚಿವರಿಗೆ ತೋರಿಸಿದರು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಮಗಳ ಫಲ ಪ್ರದರ್ಶನದಲ್ಲಿ ಕಂಡು ಬಂದಿತು ಎಂದು ಹೇಳಿದರು.
ಅಟೋಮೊಬೈಲ್ ಕ್ಷೇತ್ರದ ಜೊತೆಗೆ ಬೆಸೆದುಕೊಂಡಿರುವ ಉಕ್ಕು ಕ್ಷೇತ್ರದ ಹಲವಾರು ಕಂಪನಿಗಳು ಪ್ರದರ್ಶನದಲ್ಲಿ ತಮ್ಮ ಮಳಿಗೆಗಳನ್ನು ತೆರೆದಿದ್ದವು. ಮುಖ್ಯವಾಗಿ ಭಾರತೀಯ ಉಕ್ಕು ಪ್ರಾಧಿಕಾರ ಮಳಿಗೆಗೆ ಭೇಟಿ ಕೊಟ್ಟರು. ರಾಷ್ಟ ನಿರ್ಮಾಣಕ್ಕಾಗಿ ಪ್ರಾಧಿಕಾರ ತೊಡಗಿಸಿಕೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್ ಅವರಿಂದ ಕೂಲಂಕಷವಾಗಿ ಮಾತನಾಡಿ, ವಿವರ ತಿಳಿದುಕೊಂಡರು. ವಂದೇ ಭಾರತ್ ರೈಲು, ಯುದ್ಧ ಟ್ಯಾಂಕರ್‌ಗಳು, ಬೃಹತ್ ಸೇತುವೆಗಳು, ಯುದ್ಧ ನೌಕೆಗಳು, ವಾಹನಗಳಿಗೆ ಉಕ್ಕು ಬಳಸಲ್ಪಟ್ಟಿರುವ ವಿವಿಧ ಯಂತ್ರಗಳನ್ನು ಗಮನಿಸಿ, ಇವೆಲ್ಲಕ್ಕೂ ಉಕ್ಕು ಪ್ರಾಧಿಕಾರ ವತಿಯಿಂದ ಗುಣಮಟ್ಟದ ಉಕ್ಕು ಪೂರೈಕೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025ನಲ್ಲಿ ಪ್ರದರ್ಶಿಸಲಾದ ಆವಿಷ್ಕಾರಗಳು ಸುಸ್ಥಿರ ಮತ್ತು ಸುಧಾರಿತ ಚಲನಶೀಲತೆ ಪರಿಹಾರಗಳಲ್ಲಿ ಪ್ರಮುಖವಾದವು. ದೇಶದ ಮುನ್ನಡೆಗೆ ಅವು ಪೂರಕವಾಗಿವೆ. ಭವಿಷ್ಯದ ಭಾರತಕ್ಕೆ ಇವೆಲ್ಲವೂ ದೊಡ್ಡ ಶಕ್ತಿಯನ್ನು ತುಂಬುತ್ತವೆ ಎಂದರು.ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಜೈಲು