ಬುಧವಾರ ದೇಶವ್ಯಾಪಿ ಭಾರತ್ ಬಂದ್ ಸಫಲ ಆಗಲ್ಲ: ಆರ್. ಅಶೋಕ್

Public TV
2 Min Read
ckb ashok 1

ಚಿಕ್ಕಬಳ್ಳಾಪುರ: ಬುಧವಾರ ದೇಶವ್ಯಾಪಿ ಭಾರತ್ ಬಂದ್ ಸಫಲ ಆಗಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಬುಧವಾರ ಬಂದ್ ಗೆ ಯಾವ ಸಂಘಟನೆಗಳು ಬೆಂಬಲ ಕೊಟ್ಟಿಲ್ಲ. ಬೇಡಿಕೆಗಳ ಈಡೇರಿಕೆಗೆ ಬೇರೆ ಬೇರೆ ದಾರಿಗಳಿವೆ. ಈಗಾಗಲೇ ಎಲ್ಲಾ ಸಂಘಟನೆಗಳು ಬಂದ್ ತಿರಸ್ಕಾರ ಮಾಡಿವೆ. ಹಲವು ಸಂಘಟನೆಗಳು ಬಂದ್ ಮಾಡಲ್ಲ ಪ್ರತಿಭಟನೆಗಳನ್ನು ಮಾಡಲಾಗುವುದು ಎಂದು ಹೇಳಿದೆ. ಹೀಗಾಗಿ ಶಾಂತಿಯುತ ಪ್ರತಿಭಟನೆಗೆ ನಮ್ಮ ಸರ್ಕಾರದಿಂದ ವಿರೋಧವಿಲ್ಲ. ಪ್ರತಿಭಟನೆಗೆ ಬೇಕಾದ ಬಂದೋಬಸ್ತ್ ವ್ಯವಸ್ಥೆಯನ್ನ ನಾವು ಮಾಡ್ತೇವೆ. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಬಂದ್‍ಗೆ ಕರೆ ಕೊಡಲು ಅವಕಾಶವಿಲ್ಲ. ಆ ದೃಷ್ಠಿಯಿಂದ ರಾಜ್ಯ ಸರ್ಕಾರ ನಾಳಿನ ಬಂದ್‍ಗೆ ಬೆಂಬಲ ಕೊಡಲ್ಲ. ಅವರ ಹೋರಾಟ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡಿದೆ ಎಂದರು.

ckb ashok 3

ಇದೇ ವೇಳೆ ಜೆಎನ್‍ಯು ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೆಲ್ಲಾ ಕಮ್ಯೂನಿಸ್ಟ್ ಪ್ರೇರಿತ ಸಂಘಟನೆಗಳ ಕುತಂತ್ರ. ಜೆಎನ್‍ಯು ವಿವಿಯಲ್ಲಿ ಎಡಪಕ್ಷಗಳ ಸಿದ್ದಾಂತಗಳ ಸಂಘಗಳಿವೆ. ಇದು ಆ ಸಂಘಟನೆಗಳು ಮಾಡುತ್ತಿರುವ ಕೀಟಲೆಗಳು. ಈ ಹಿಂದೆಯೂ ಸಹ ಜೆಎನ್‍ಯು ವಿವಿಯಲ್ಲಿ ದೇಶದ್ರೋಹದ ಹೇಳಿಕೆಗಳು ಸಹ ಕೇಳಿ ಬಂದಿದ್ದವು. ಕನ್ನಯ್ಯ ಕುಮಾರ್ ಸಹ ದೇಶದ್ರೋಹದ ಹೇಳಿಕೆ ನೀಡಿ ಈಗ ಕೇಸು ಎದುರಿಸುತ್ತಿದ್ದಾರೆ. ಹೀಗಾಗಿ ಶಾಲಾ-ಕಾಲೇಜು ಆವರಣಗಳನ್ನು ದೊಂಬಿ ಮಾಡಲು ಬಳಸುವುದು ಸರಿಯಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.

ckb ashok 2

ಎಬಿವಿಬಿಪಿ ಸಂಘಟನೆ ಈ ದಾಳಿ ಮಾಡಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಈ ಘಟನೆಯ ತನಿಖೆ ನಡೆಯುತ್ತಿದೆ. ಇದು ಕಮ್ಯೂನಿಸ್ಟ್ ಪ್ರೇರಿತರ ಹೇಳಿಕೆಗಳು ಎಂದರು. ಕನ್ನಯ್ಯ ದೇಶದ್ರೋಹಿ ಹೇಳಿಕೆ ಕೊಟ್ಟಾಗ ಎಬಿವಿಪಿ ಹೇಳಿಕೊಟ್ಟಿತ್ತಾ? ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿ, ಮಕರ ಸಂಕ್ರಾಂತಿ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈಗಾಗಲೇ ಈ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರದ ನಾಯಕರ ಜೊತೆ ಚರ್ಚೆ ಮಾಡಿ ವಿಸ್ತರಣೆ ಮಾಡಲಾಗುವುದು. ನಾವು ಮಾತು ಕೊಟ್ಟಿದ್ದ ಎಲ್ಲರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಅಭಯ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *