Bengaluru City
ಬುಧವಾರ ಭಾರತ್ ಬಂದ್ – ಏನು ಇರುತ್ತೆ? ಏನು ಇರಲ್ಲ?

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬಂದ್‍ಗೆ ಕರೆ ನೀಡಿವೆ.
ನಮ್ಮ ಬೇಡಿಕೆ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಪದೇ ಪದೇ ಸಂಘಟನೆಗಳು ದನಿ ಎತ್ತಿದ್ದರೂ, ಸರ್ಕಾರ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂದು ಆರೋಪಿಸಿ ಎಐಟಿಯುಸಿ, ಎಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಸ್‍ಇಡಬ್ಲ್ಯುಎ, ಎಐಸಿಸಿಟಿಯು, ಎಲ್‍ಪಿಎಫ್ ಮತ್ತು ಯುಟಿಯುಸಿ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಆದರೆ ನಾಳೆ ನಡೆಯಲಿರುವ ಬಂದ್ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ. ಯಾವ ಸಂಘಟನೆಗಳು ಕೂಡ ಬಂದ್‍ಗೆ ಬೆಂಬಲಿಸಿಲ್ಲ.
ಎಸ್ಮಾ ಅಸ್ತ್ರ ಪ್ರಯೋಗಿಸುತ್ತಿದ್ದಂತೆ, ಸಾರಿಗೆ ನೌಕರರು ಕೂಡ ಬಂದ್ ಕೈ ಬಿಟ್ಟಿದ್ದಾರೆ. ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರತಿಭಟನಾ ನಿರತ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಜನವರಿ 8ಕ್ಕೆ ಮುಷ್ಕರ ಅಥವಾ ಮೆರವಣಿಗೆಗೆ ಅನುಮತಿ ಇಲ್ಲ. ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸೆಕ್ಷನ್ 107(ಅನುಮತಿ ಪಡೆಯದೇ ಮೆರವಣಿಗೆ ನಡೆಸುವುದು) ಅಡಿ ಕೇಸ್ ದಾಖಲಿಸುತ್ತೇವೆ. ಮೆರವಣಿಗೆ ಬದಲಿಗೆ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಬೇಕೆಂದು ಆದೇಶ ಹೊರಡಿಸಿದ್ದಾರೆ.
ಬಂದ್‍ಗೆ ಯಾವುದೇ ಸಂಘಟನೆಗಳಿಂದ ಬೆಂಬಲ ಸಿಗದಿದ್ದರಿಂದ ಸಿಐಟಿಯು ಅಧ್ಯಕ್ಷ ಅನಂತ ಸುಬ್ಬಾರಾವ್ ಉಲ್ಟಾ ಹೊಡೆದಿದ್ದಾರೆ. ನಾವು ಬಂದ್ ಮಾಡುತ್ತಿಲ್ಲ. 13 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕಾರ್ಖಾನೆಗಳು, ಬ್ಯಾಂಕ್‍ಗಳು ಇರುವುದಿಲ್ಲ. ಸಾರಿಗೆ ನಿಗಮಗಳು ಸ್ಟ್ರೈಕ್ ಮಾಡುತ್ತಿಲ್ಲ. ಡಿಪೋ ಮಟ್ಟದಲ್ಲಿ ಧರಣಿಗಳು ನಡೆಯಲಿವೆ. ಜನ ಇರುವುದಿಲ್ಲ. ಜಾಸ್ತಿ ಬಸ್ ಓಡಿಸಿ ಲಾಸ್ ಮಾಡಿಕೊಳ್ಳಬೇಡಿ ಅಂದಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ಭಾರತ್ ಬಂದ್ ಠುಸ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬುಧವಾರ ಕಾರ್ಮಿಕರ ಪ್ರತಿಭಟನೆ – ಭಾರತ್ ಬಂದ್ ಯಾಕೆ? ಬೇಡಿಕೆ ಏನು?
ಬಸ್ ಇರುತ್ತೆ:
ಮುಷ್ಕರದಲ್ಲಿ ಭಾಗಿಯಾಗದಂತೆ ಸಾರಿಗೆ ನೌಕರರ ಮೇಲೆ ಎಸ್ಮಾ(ಅಗತ್ಯ ಸೇವೆ ನಿರ್ವಹಣಾ ಕಾಯ್ದೆ) ಅಸ್ತ್ರವನ್ನು ಪ್ರಯೋಗಿಸಲು ಸರ್ಕಾರ ಮುಂದಾಗಿದೆ. ಎಸ್ಮಾ ಜಾರಿಗೆ ಹೆದರಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಕೆಲ ನೌಕರರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆಯಿದೆ.
ಶಾಲೆ ಇರುತ್ತೆ:
ಖಾಸಗಿ ಶಾಲಾ-ಕಾಲೇಜುಗಳು ಬಂದ್ ಬೆಂಬಲಿಸದ ಕಾರಣ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ. ಆಯಾ ಶಾಲಾ ಆಡಳಿತ ಮಂಡಳಿಗೆ ರಜೆ ನೀಡುವ ಅಧಿಕಾರವನ್ನು ನೀಡಲಾಗಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ರಿಕ್ಷಾ ಇರುತ್ತೆ:
ಸಿಐಟಿಯು ಅಡಿ ಬರುವ ಆಟೋ ಚಾಲಕರ ಸಂಘಟನೆಗಳ ಮಾತ್ರ ಬೆಂಬಲ ನೀಡಿದ್ದು ಬೆಂಗಳೂರು ನಗರ ಆಟೋ ಚಾಲಕರ ಸಂಘದಿಂದ ಬೆಂಬಲ ಇಲ್ಲ. ಆದರ್ಶ ಆಟೋ ಯೂನಿಯನ್‍ನಿಂದ ಬೆಂಬಲ ನೀಡಿಲ್ಲ. ಎಂದಿನಂತೆ ಆಟೋ, ಊಬರ್, ಟ್ಯಾಕ್ಸಿ ಸಂಚಾರ ಇರಲಿದೆ.
ಖಾಸಗಿ ಪ್ರವಾಸ ವಾಹನಗಳ ಸೇವೆ ಎಂದಿನಂತೆ ಇರಲಿದ್ದು, ಲಾರಿ ಮಾಲೀಕರ ಸಂಘವ ಬೆಂಬಲ ಇಲ್ಲ. ಎಪಿಎಂಸಿ ಮಾರುಕಟ್ಟೆ ವಹಿವಾಟು ಎಂದಿನಂತೆ ನಡೆಸಲಿದೆ. ಕನ್ನಡ ಪರ ಸಂಘಟನೆಗಳಿಗೆ ಭಾರತ್ ಬಂದ್ ಮಾಹಿತಿಯೇ ಇಲ್ಲ. ಸಂಬಂಧಪಟ್ಟವರು ಬೆಂಬಲ ಕೇಳಿದರೆ ನೋಡೋಣ ಎಂದು ಕರವೇ ತಿಳಿಸಿದೆ.
ಭಾರತ್ ಬಂದ್‍ಗೆ ಹೋಟೆಲ್ ಸಂಘ ಬೆಂಬಲ ಇಲ್ಲ. ಮಾಲ್‍ಗಳು ಕೂಡ ನಾಳೆ ತೆರೆದಿರುತ್ತವೆ. ಬಂದ್‍ಗೆ ಟ್ಯಾಕ್ಸಿ ಮಾಲೀಕರ ಬೆಂಬಲ ನೀಡಿಲ್ಲ. ಲಾರಿ ಸಂಚಾರ ಕೂಡ ಇರಲಿದ್ದು ಅಗತ್ಯ ವಸ್ತುಗಳ ಸಾಗಾಣೆ ಎಂದಿನಂತಿರಲಿವೆ.
ಯಾರೆಲ್ಲ ಬೆಂಬಲ?
ಎಸ್‍ಬಿಐ ಹೊರತು ಪಡಿಸಿ ಉಳಿದ ಎಲ್ಲಾ ಬ್ಯಾಂಕ್‍ಗಳ ಸೇವೆ ಸ್ಥಗಿತವಾಗುವ ಸಾಧ್ಯತೆಯಿದೆ. ಉಳಿದ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದೇ ಬ್ಯಾಂಕ್ ಕೆಲಸ ಮಾಡುವುದು ಉತ್ತಮ. ಭಾರತ್ ಬಂದ್‍ಗೆ ರೈತರಿಂದ ಬೆಂಬಲ ವ್ಯಕ್ತವಾಗಿದ್ದು ಬಂದ್ ದಿನ ಯಾವುದೇ ಉತ್ಪನ್ನದ ಮಾರಾಟವೂ ಇಲ್ಲ, ಖರೀದಿಯೂ ಇಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
