ಚಿಕ್ಕಬಳ್ಳಾಪುರ: ಭಾರತ್ ಬಂದ್ ಹಿನ್ನೆಲೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಮಂದಿ ಪ್ರತಿಭಟನಕಾರರನ್ನ ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತ್ ಬಂದ್ ಹಿನ್ನೆಲೆ ಸಿಪಿಐಎಂ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಶಿಡ್ಲಘಟ್ಟ ವೃತ್ತದ ರಸ್ತೆಯಲ್ಲಿ ಕುಳಿತು ಪ್ರತಿಭಟನಾ ಧರಣಿ ಮಾಡಿದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಕುಳಿತು ಪ್ರತಿಭಟನಾ ಧರಣಿ ನಡೆಸಿ ಅಲ್ಲೇ ತಿಂಡಿ ತಿನ್ನುವ ಮೂಲಕ ಹಸಿವು ನೀಗಿಸಿಕೊಂಡರು. ಆದರೆ ಪ್ರತಿಭಟನೆ ಹಿನ್ನಲೆ ಗೌರಿಬಿದನೂರು ಮಾರ್ಗದ ರಸ್ತೆ ಬಂದ್ ಆದ ಪರಿಣಾಮ ಜಿಲ್ಲಾಸ್ಪತ್ರೆಗೆ ಬಂದು ಹೋಗುವ ಅಂಬುಲೆನ್ಸ್ ಗಳ ಒಡಾಟಕ್ಕೆ ಅಡ್ಡಿಯಾಗಿತ್ತು.
Advertisement
Advertisement
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ಅಭಿನವ್ ಖರೆ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡರು. ಈ ವೇಳೆ ಅಂಬುಲೆನ್ಸ್ ಸಹ ಅದೇ ರಸ್ತೆಯಲ್ಲಿ ಬಂದ ಪರಿಣಾಮ ಪ್ರತಿಭಟನಕಾರರನ್ನ ಚದುರಿಸಿದ ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡರು.
Advertisement
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ವಾಹನಗಳ ಸಂಚಾರ ಎಂದಿನಂತೆ ಸಾಗಿದ್ದು, ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದೆಡೆ ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement
ಇದೇ ವೇಳೆ ಮಾತನಾಡಿದ ಎಸ್‍ಪಿ ಅಭಿನವ್ ಖರೆ ಅವರು, ಜಿಲ್ಲೆಯ ಎಲ್ಲಾ ಕಡೆ ಶಾಂತಿಯುತ ಪ್ರತಿಭಟನೆಗಳು ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಗುಡಿಬಂಡೆಯಲ್ಲಿ ಬಲವಂತವಾಗಿ ಟೀ ಅಂಗಡಿ ಮುಚ್ಚಿಸಿದ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಆದರೆ ಈ ಸಂಬಂಧ ಅಂಗಡಿ ಮಾಲೀಕ ದೂರು ಕೊಟ್ಟಿಲ್ಲ ಎಂದು ಪ್ರತಿಕ್ರಿಯಿಸಿದರು.