ಬೆಂಗಳೂರು: ನವಿರಾದ ಹಾಡುಗಳಿಂದ, ಅದಕ್ಕೆ ತಕ್ಕುದಾದ ಪ್ರೇಮಕಥೆಯ ಸುಳಿವಿನಿಂದ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಭಾನು ವೆಡ್ಸ್ ಭೂಮಿ. ಕಡೆಯ ಘಳಿಗೆಯಲ್ಲಿ ಮತ್ತೊಂದಷ್ಟು ದಿಕ್ಕಿನಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ಈ ಚಿತ್ರವೀಗ ಬಿಡುಗಡೆಯಾಗಿದೆ. ಚಿಕ್ಕಮಗಳೂರು ಸೀಮೆಯ ಹುಡುಗಿಯೊಬ್ಬಳು ಪ್ರೀತಿಗಾಗಿ ಅರಸಿ ಪಟ್ಟಣ ಸೇರುವ, ಅದರ ಆಚೀಚೆಗೆ ಒಂದಷ್ಟು ಅನಿರೀಕ್ಷಿತ ಘಟನಾವಳಿಗಳ ಸುತ್ತಾ ಹೆಣೆಯಲ್ಪಟ್ಟಿರುವ ಈ ಕಥೆ ಪ್ರೇಕ್ಷಕರನ್ನು ತಲುಪಿಕೊಂಡಿದೆ.
ಆಕೆ ಭೂಮಿ. ಚಿಕ್ಕಮಗಳೂರು ಸೀಮೆಯ ಹಳ್ಳಿಯೊಂದರಲ್ಲಿ ಬೆಳೆದ ಭೂಮಿಯ ಪಾಲಿಗೆ ಆ ಊರೇ ಜಗತ್ತು. ಮನೆಮಂದಿಯ ಆರೈಕೆ, ಊರ ಮಂದಿಯ ಒಡನಾಟದೊಂದಿಗೆ ಮುದ್ದಾಗಿ ಬೆಳೆದ ಆಕೆ ಮೃಧುಭಾಷಿ. ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಬೆಳೆದ ಭೂಮಿ ತನ್ನ ಹೆಸರಿಗೆ ತಕ್ಕಂಥಾ ಗುಣಗಳಿಂದಲೇ ಎಲ್ಲರ ಪ್ರೀತಿ ಪಾತ್ರಳಾದ ಹುಡುಗಿ. ಈಕೆಗೆ ಪ್ರಭು ಎಂಬಾತನ ಮೇಲೆ ಪ್ರೀತಿ. ಆದರೆ ಒಂದು ದಿನ ಆತ ಹೇಳದೆ ಕೇಳದೆ ನಾಪತ್ತೆಯಾಗಿ ಬಿಡುತ್ತಾನೆ. ಆತ ಎಲ್ಲಿ ಹೋಗಿದ್ದಾನೆಂಬ ಸುಳಿವು ಇಡೀ ಊರಲ್ಲಿ ಯಾರಿಗೂ ಇರೋದಿಲ್ಲ.
ಈ ಹುಡುಗಿಗೆ ಅದು ಹೇಗೋ ಪ್ರಭು ಮೈಸೂರಲ್ಲಿದ್ದಾನೆಂಬ ಏಕೈಕ ವಿಚಾರ ಗೊತ್ತಾಗಿ ಬಿಡುತ್ತದೆ. ಮೋಹಕ್ಕೆ ಬಿದ್ದು ಮೈಸೂರಿಗೆ ಬಂದಿಳಿಯೋ ಭೂಮಿ ಪಾಲಿಗೆ ಅಲ್ಲೆದುರಾಗೋದು ಭರಿಸಿಕೊಳ್ಳಲಾಗದ ವಿಚಿತ್ರ ಜಗತ್ತು. ಅಷ್ಟು ದೊಡ್ಡ ಊರಲ್ಲಿ ಪ್ರೇಮಿಯನ್ನು ಹುಡುಕೋ ಹರಸಾಹಸ ಮಾಡೋ ಭೂಮಿ ಪುಂಡರ ಪಟಾಲಮ್ಮಿಗೆ ಬಲಿಯಾಗಬಹುದಾದ ಆಘಾತಕಾರಿ ಘಟನೆಯೂ ನಡೆಯುತ್ತದೆ. ಆಗ ಸ್ಥಳೀಯ ಹುಡುಗ ಭಾನು ಬಂದು ಕಾಪಾಡ್ತಾನೆ. ಆತನ ಬೆಂಬಲದೊಂದಿಗೆ ಕಡೆಗೂ ಪ್ರಭುವನ್ನು ಪತ್ತೆಹಚ್ಚಿದಾಗ ಅಲ್ಲೊಂದು ಆಘಾತ ಭೂಮಿಗೆದುರಾಗುತ್ತೆ.
ಅಲ್ಲಿಂದಾಚೆಗೆ ಹಲವಾರು ತಿರುವುಗಳ ಮೂಲಕ ಕಥೆ ಸಾಗಿ ಹೋಗುತ್ತದೆ. ಕಡೆಗೂ ಭೂಮಿ ತನ್ನ ಪ್ರೀತಿಯನ್ನು ದಕ್ಕಿಸಿಕೊಳ್ಳುತ್ತಾಳಾ? ಆ ಹಾದಿಯಲ್ಲಿ ಎಂತೆಂಥಾ ಚಹರೆಗಳು ಬದಲಾಗುತ್ತವೆ ಅನ್ನೋದನ್ನು ನಿರ್ದೇಶಕ ಜೆಕೆ ಆದಿ ಒಂದಷ್ಟು ರೋಚಕ ಎಲಿಮೆಂಟುಗಳೊಂದಿಗೆ ಹೇಳಿದ್ದಾರೆ. ಹಳ್ಳಿ ವಾತಾವರಣ ಮತ್ತು ಪೇಟೆಯ ಸಂಗಮದಂತಿರೋ ದೃಶ್ಯಾವಳಿಗಳು ಮುದ ನೀಡುತ್ತವೆ. ನಾಯಕ ಸೂರ್ಯಪ್ರಭ್ ಮತ್ತು ನಾಯಕಿ ರಿಷಿತಾ ಮಲ್ನಾಡ್ ಕೂಡಾ ಚೆಂದಗೆ ನಟಿಸಿದ್ದಾರೆ. ಮಿಕ್ಕುಳಿದ ಕಲಾವಿದರೂ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ತುಂಬಾ ಪಾತ್ರಗಳು, ವಿಶಿಷ್ಟವಾದ ತಿರುವುಗಳೊಂದಿಗೆ, ಸೂಕ್ಷ್ಮವಾದ ಪ್ರೇಮತೀವ್ರತೆಯೊಂದಿಗೆ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಂತಿದೆ.
ರೇಟಿಂಗ್: 3.5/5