ತುಮಕೂರು: ರಾಜಕಾರಣಿಗಳ ಜತೆ ಸೇರಿ ಮಠಾಧಿಪತಿಗಳು ಹಾಳಾಗುತ್ತಿದ್ದೇವೆ. ಮಠಾಧೀಶರು ಎಚ್ಚರದಿಂದ ದೇಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಧರ್ಮದಿಂದ ದೇಶ ಉಳಿಸುವ ಕೆಲಸ ಮಾಡಬೇಕು. ನಮಗೆ ರಾಜಕೀಯ ಬೇಡ ದೇಶ ಬೇಕಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ವಿಷಾದಿಸಿದರು.
ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಯೋಗಿಗಳ ಸಂಸ್ಮರಣೆ, ಗುರುಲಿಂಗ ಜಂಗಮರ ಪೂಜೆ, ಬಸವ ಜಯಂತಿ, ರಾಜ್ಯಮಟ್ಟದ ಭಜನಾ ಮೇಳ ಮತ್ತು ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಆರ್ಕೆಸ್ಟ್ರಾಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಮಠ ಹಾಳು ಮಾಡುತ್ತಿದ್ದಾರೆ. ಆದರೆ, ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹಿಂದೇಟು ಹಾಕಲಾಗುತ್ತಿದೆ. ಹಲವು ದಾನಿಗಳು ಸಮಾಜದ ಸತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ತಲೆ ಹೊಡೆಯವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶ ಆಳುವವರು ಬಡ ಜನತೆಯ ಹಿತವನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ನಮ್ಮ ಮನೆ’ಗೆ ಬನ್ನಿ – ಕನಸಿನ ಮನೆ ಖರೀದಿಸಿ
ಬಸವಣ್ಣ ಅವರು ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಲಿಂಗಧಾರಣೆ ಮಾಡಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದರು. ಆ ನಿಟ್ಟಿನಲ್ಲಿ ಅವರ ತತ್ವ, ಆದರ್ಶಗಳನ್ನು ಗವಿ ಮಠದಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಇದೇ ವೇಳೆ ಬೆಳ್ಳಾವಿ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಚಂದ್ರಶೇಖರ ಸ್ವಾಮೀಜಿ ಅವರು ಮಠದ ಮೂಲಕ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 13 ವರ್ಷಗಳಲ್ಲಿ 10 ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಎಲ್ಲರಿಗೂ ಮಾದರಿ ಆಗಿದ್ದಾರೆ. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.
40ಕ್ಕೂ ಹೆಚ್ಚು ಭಜನಾ ತಂಡಗಳು ಭಾಗವಹಿಸಿದ್ದವು. ಕೊಳಗುಂದ ಮಠದ ಜಯಚಂದ್ರಶೇಖರ ಸ್ವಾಮೀಜಿ, ಮಾಡಾಳು ಮಠದ ರುದ್ರಮುನಿ ಸ್ವಾಮೀಜಿ, ಮಾಗಡಿ ರುದ್ರಮುನೀಶ್ವರ ಮಠದ ಚಂದ್ರಶೇಖರ ಸ್ವಾಮೀಜಿ, ಕುಣಿಗಲ್ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವಾ ವಿದ್ಯಾಶಂಕರ ಸ್ವಾಮೀಜಿ, ತೇವಡೆಹಳ್ಳಿಯ ಗೋಸಲ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದರು.