ಬ್ಯಾಂಕಾಕ್: ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸಮರ್ಥಿಸಿಕೊಂಡು ಇದೊಂದು ʼಬೆಸ್ಟ್ ಡೀಲ್ʼ ಎಂದು ಬಣ್ಣಿಸಿದ್ದಾರೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವಾದ್ಯಂತ ಆಗಿರುವ ಇಂಧನ ಬೆಲೆ ಏರಿಕೆಯ ಬಗ್ಗೆ ಚರ್ಚಿಸಿದರು.
Advertisement
ನಾವು ನಮ್ಮ ಆಸಕ್ತಿಯ ಬಗ್ಗೆ ತುಂಬಾ ಮುಕ್ತ ಮತ್ತು ಪ್ರಾಮಾಣಿಕ ಮನಸ್ಥಿತಿಯನ್ನು ಹೊಂದಿದ್ದೇವೆ. ನಮ್ಮದು 2000 ಡಾಲರ್(ಅಂದಾಜು 1.58 ಲಕ್ಷ ರೂ.) ತಲಾ ಆದಾಯ ಹೊಂದಿರುವ ದೇಶ. ದುಬಾರಿ ಇಂಧನ ಬೆಲೆಗಳನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಿಲ್ಲ. ಉತ್ತಮ ವ್ಯವಹಾರ ಮಾಡುವುದು ನನ್ನ ನೈತಿಕ ಕರ್ತವ್ಯ ಎಂದರು.
Advertisement
Advertisement
9ನೇ ಭಾರತ-ಥಾಯ್ಲೆಂಡ್ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವರು ಥಾಯ್ಲೆಂಡ್ ಪ್ರವಾಸಲ್ಲಿದ್ದಾರೆ. ಇದನ್ನೂ ಓದಿ: ಆಫರ್ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ
Advertisement
ಈಗ ತೈಲ ಮತ್ತು ಅನಿಲಗಳ ಬೆಲೆಗಳು ಹೆಚ್ಚಾಗಿವೆ. ಏಷ್ಯಾ ದೇಶಗಳಿಗೆ ಮಧ್ಯಪ್ರಾಚ್ಯ ದೇಶಗಳಿಂದ ತೈಲ ಪೂರೈಕೆಯಾಗುತ್ತಿತ್ತು. ಆದರೆ ನಮ್ಮ ಸಾಂಪ್ರಾದಾಯಿಕ ಪೂರೈಕೆದಾರರು ಈಗ ಯುರೋಪ್ ಕಡೆ ತಿರುಗುತ್ತಿದ್ದಾರೆ. ಯಾಕೆಂದರೆ ಯುರೋಪ್ ರಷ್ಯಾದಿಂದ ಕಡಿಮೆ ತೈಲವನ್ನು ಖರೀದಿಸುತ್ತಿದೆ. ಬೆಲೆಗಳು ದುಬಾರಿಯಾಗಿರುವ ಸಮಯದಲ್ಲಿ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಲು ಪ್ರಯತ್ನ ಮಾಡುತ್ತದೆ. ಈಗ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಜೈಶಂಕರ್ ಸಮರ್ಥಿಸಿಕೊಂಡರು.
ತೈಲ ಖರೀದಿಯನ್ನು ನಾವು ರಕ್ಷಣಾತ್ಮಕ ರೀತಿಯಲ್ಲಿ ಮಾಡುತ್ತಿಲ್ಲ. ನಾವು ನಮ್ಮ ಆಸಕ್ತಿಗಳ ಬಗ್ಗೆ ತುಂಬಾ ಮುಕ್ತ ಮತ್ತು ಪ್ರಾಮಾಣಿಕವಾಗಿದ್ದೇವೆ ಎಂದರು. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್
ಜೈಶಂಕರ್ ಭಾರತದ ನಡೆಯನ್ನು ವಿಶ್ವ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವುದು ಇದು ಮೊದಲನೆಯದ್ದಲ್ಲ. ಈ ಹಿಂದೆಯೂ ಸರಿಯಾಗಿ ಸಮರ್ಥಿಸಿ ತಿರುಗೇಟು ನೀಡಿದ್ದರು. ರಷ್ಯಾದಿಂದ ಭಾರತ ಮಾತ್ರ ತೈಲ ಖರೀದಿ ಮಾಡುತ್ತಿಲ್ಲ. ಯುರೋಪ್ ಈಗಲೂ ಗ್ಯಾಸ್ ಖರೀದಿ ಮಾಡುತ್ತಿದೆ. ಹೀಗಿದ್ದರೂ ಭಾರತ ಮಾತ್ರ ಟಾರ್ಗೆಟ್ ಯಾಕೆ ಎಂದು ಪ್ರಶ್ನಿಸಿದ್ದರು.
ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ರಷ್ಯಾ ಯುದ್ಧಕ್ಕೆ ನಿಧಿ ನೀಡಿದಂತಾಗುತ್ತದೆ ಎಂಬ ಪ್ರಶ್ನೆಗೆ, ಭಾರತ ತೈಲ ಖರೀದಿಸಿ ರಷ್ಯಾಗೆ ಸಹಾಯ ಮಾಡುತ್ತದೆ ಎಂದಾದರೆ ರಷ್ಯಾದಿಂದ ಗ್ಯಾಸ್ ಖರೀದಿಸುತ್ತಿರುವ ಯುರೋಪ್ ದೇಶಗಳು ಯುದ್ಧಕ್ಕೆ ನಿಧಿ ನೀಡಿದಂತೆ ಆಗುವುದಿಲ್ಲವೇ ಎಂದು ಮರು ಪ್ರಶ್ನೆ ಹಾಕಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.