ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಣೇಶ ವಿಗ್ರಹ ಸ್ಥಾಪಿಸಿ, ಸಂಗೀತ, ಲೈಟಿಂಗ್ ನೀಡಿ ಭರ್ಜರಿಯಾಗಿ ಹಬ್ಬ ಸಂಭ್ರಮಾಚರಣೆ ಮಾಡುವ ಉದ್ದೇಶ ಹೊಂದಿದ್ದ ಮಂದಿಗೆ ಬೆಸ್ಕಾಂ ಶಾಕ್ ನೀಡಲು ಸಿದ್ಧತೆ ನಡೆಸಿದೆ.
ಗಣೇಶನ ಹಬ್ಬ ಬಂದರೆ ನಗರದ ಬೀದಿಗಳಲ್ಲಿ ಗಣೇಶ್ ವಿಗ್ರಹ ಸ್ಥಾಪಿಸಿ ಬಣ್ಣಬಣ್ಣದ ಲೈಟಿಂಗ್ ವ್ಯವಸ್ಥೆ ಮಾಡುವ ಹಲವು ಮಂದಿ ಅನಧಿಕೃತವಾಗಿ ವಿದ್ಯುತ್ ಪಡೆಯುವುದಕ್ಕೆ ಕಡಿವಾಣ ಹಾಕಲು ಬೆಸ್ಕಾಂ ಮುಂದಾಗಿದೆ. ಗಣೇಶ ವಿಗ್ರಹ ಸ್ಥಾಪನೆ ಮಾಡುವ ಮುನ್ನ ಬೆಸ್ಕಾಂಗೆ ಮಾಹಿತಿ ಸಂಪರ್ಕ ಪಡೆಯವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದೇ ವಿದ್ಯುತ್ ಪಡೆದರೆ ದಂಡ ವಿಧಿಸುವ ಕುರಿತು ಬೆಸ್ಕಾಂ ಚಿಂತನೆ ನಡೆಸಿದೆ. ಈ ನಿಯಮ ಉಲ್ಲಂಘಿಸಿದರೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.
ಸಂಪರ್ಕ ಪಡೆಯುವುದು ಹೇಗೆ?
ನಗರದಲ್ಲಿ ಗಣೇಶ ವಿಗ್ರಹ ಮೂರ್ತಿ ಸ್ಥಾಪಿಸಲು ಇಚ್ಛಿಸುವವರು ವಿದ್ಯುತ್ ಸಂಪರ್ಕ ಪಡೆಯಲು ಸ್ಥಳೀಯ ಬೆಸ್ಕಾಂ ಉಪವಿಭಾಗಕ್ಕೆ ಪತ್ರ ಬರೆದು ನಿಗದಿ ಪಡಿಸಿದ ಹಣ ಪಾವತಿ ಮಾಡಬೇಕು. ಬಳಿಕ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ತಾತ್ಕಾಲಿಕ ಸಂಪರ್ಕ ನೀಡಲಿದ್ದಾರೆ ಎಂದು ಪ್ರಧಾನ ವ್ಯವಸ್ಥಾಪಕರಾದ ಜಯಂತಿ ತಿಳಿಸಿದ್ದಾರೆ.
ದೇಶಾದ್ಯಂತ ಗಣೇಶನ ಹಬ್ಬವನ್ನು ಜಾತ್ಯಾತೀತವಾಗಿ ಆಚರಿಸುವ ಸಂಸ್ಕೃತಿ ಇದ್ದು, ಈ ವೇಳೆ ಕಾನೂನು ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv