ಬೆಂಗಳೂರು: ವಿದ್ಯುತ್ ಶುಲ್ಕ ಪಾವತಿಗೆ ಬಿಲ್ ನೀಡಿದ ದಿನದಿಂದ 6 ತಿಂಗಳುಗಳ ಕಾಲಾವಕಾಶವಿರುತ್ತದೆ ಎಂಬ ಸುಳ್ಳು ಮಾಹಿತಿಯನ್ನು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದ್ದು, ಇಂತಹ ವದಂತಿ ಮತ್ತು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಾಲಕಾಲಕ್ಕೆ ಅನುಮೋದಿಸುವ ದರದಲ್ಲಿ ಗ್ರಾಹಕರು ಬಳಸುವ ವಿದ್ಯುತ್‍ಗೆ ಬೆಸ್ಕಾಂ ವಿದ್ಯುತ್ ಶುಲ್ಕವನ್ನು ಸಂಗ್ರಹಿಸುತ್ತಿದ್ದು, ಬಿಲ್ ವಿತರಿಸಿದ ದಿನದಿಂದ ಅದರ ಪಾವತಿಗೆ 15 ದಿನಗಳ ಕಾಲಾವಕಾಶವಿರುತ್ತದೆ. ಜೊತೆಗೆ ಗ್ರಾಹಕರಿಗೆ ನೀಡುವ ಮಾಸಿಕ ಬಿಲ್‍ನ ಹಿಂಬದಿ ಸೂಚನೆ 1 ರಲ್ಲಿ ಬಿಲ್ ಪಾವತಿಸಲು ಅಂತಿಮ ಗಡವು, ಬಿಲ್ ವಿತರಿಸಿದ ದಿನದಿಂದ 15 ದಿನಗಳ ಅವಧಿಯಾಗಿರುತ್ತದೆ ಎಂದು ನಮೂದಿಸಲಾಗಿದೆ. ಗ್ರಾಹಕರು ನಿಗದಿತ ಅವಧಿಯೊಳಗೆ ಹಣ ಪಾವತಿ ಮಾಡದಿದ್ದಲ್ಲಿ ಗಡುವು ದಿನಾಂಕದ ನಂತರ 15 ದಿನಗಳ ಕಾಲಾವಧಿಯ ನೋಟಿಸ್ ಜಾರಿ ಮಾಡಿ ಬಾಕಿ ಪಾವತಿಸದ ಪ್ರಯುಕ್ತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಅಧಿಕಾರವನ್ನು ಬೆಸ್ಕಾಂ ಹೊಂದಿರುತ್ತದೆ ಎಂದು ಬೆಸ್ಕಾಂನ ನಿರ್ದೇಶಕರು (ಹಣಕಾಸು) ತಿಳಿಸಿದ್ದಾರೆ. ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್
ಬಿಲ್ ವಿತರಿಸಿದ ದಿನಾಂಕದಿಂದ 15 ದಿನದೊಳಗೆ ಬಿಲ್‍ನ ಮೊತ್ತವನ್ನು ಗ್ರಾಹಕರು ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಬೆಸ್ಕಾಂ ಮಿತ್ರ ಆ್ಯಪ್, ಹತ್ತಿರದ ಬೆಸ್ಕಾಂ ಕಚೇರಿ, ಬೆಸ್ಕಾಂ ವೆಬ್ ಸೈಟ್ ಮತ್ತು ಗೂಗಲ್ ಆ್ಯಪ್‍ಗಳಲ್ಲಿ ಮಾತ್ರ ಪಾವತಿಸಬಹುದಾಗಿದೆ. ಇಲೆಕ್ಟ್ರಿಸಿಟಿ ಕಾಯ್ದೆ ಕುರಿತಂತೆ ಜನರಿಗೆ ದಾರಿ ತಪ್ಪಿಸುವ ಮಾಹಿತಿ ನೀಡಿ, ವಿದ್ಯುತ್ ಬಿಲ್ ಪಾವತಿಸಲು 6 ತಿಂಗಳ ಕಾಲವಿರುತ್ತದೆ. ಒಂದು ವೇಳೆ 6 ತಿಂಗಳ ನಂತರ ಬಿಲ್ ಕಟ್ಟದಿದ್ದ ಪಕ್ಷದಲ್ಲಿ ಬೆಸ್ಕಾಂ ಜಾಗೃತದಳ ಬಿಲ್ ಪಾವತಿಸುವಂತೆ 15 ದಿನಗಳ ಕಾಲ ಅವಧಿಯ ನೋಟಿಸ್ ನೀಡುತ್ತದೆ ಎಂಬ ಸುಳ್ಳು ಮಾಹಿತಿಯನ್ನು ವ್ಯಕ್ತಿಯೋರ್ವ ಕೆಲವು ದಿನಗಳ ಹಿಂದೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಕುರಿತು ಬೆಸ್ಕಾಂ ಜಾಗೃತದಳಕ್ಕೆ ಮಾಹಿತಿ ನೀಡಿದ್ದು, ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ.
ಇಂತಹ ವದಂತಿ ಬಗ್ಗೆ ಕಿವಿಗೊಡಬೇಡಿ, ಇಂತಹ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಮಾಹಿತಿ ಇದ್ದಲ್ಲಿ, ಬೆಸ್ಕಾಂನ ಅಧೀಕ್ಷಕರು, ಜಾಗೃತದಳ ಇವರ ದೂರವಾಣಿ ಸಂಖ್ಯೆ – 9448042375ಗೆ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್, ಜಾಗೃತದಳ ಇವರ ದೂರವಾಣಿ ಸಂಖ್ಯೆ – 9448094802ಗೆ ಕರೆ ಮಾಡಲು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ
ಆನ್ ಲೈನ್ ವಂಚನೆ: ಸುಳ್ಳು ಸುದ್ದಿ ಹರಡುವುದರ ಜೊತೆಗೆ ಗ್ರಾಹಕರನ್ನು ಆನ್‍ಲೈನ್ ವಂಚಕರು ಕಾಡುತ್ತಿದ್ದಾರೆ. ನಿಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಸ್‍ಎಂಎಸ್ ಕಳುಹಿಸಿ ವಂಚಿಸುವ ಆನ್‍ಲೈನ್ ವಂಚನೆಕೋರರ ಚಾಲದ ಬಗ್ಗೆ ಎಚ್ಚರದಿಂದಿರುವಂತೆ ಬೆಸ್ಕಾಂ ಗ್ರಾಹಕರನ್ನು ಎಚ್ಚರಿಸಿದೆ. ಆನ್‍ಲೈನ್ ವಂಚನೆಕೋರರು, ಗ್ರಾಹಕರಿಗೆ ಕರೆ ಮಾಡಿ ತಾವು ಸೂಚಿಸುವ ಮೊಬೈಲ್‍ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ವಿದ್ಯುತ್ ಶುಲ್ಕವನ್ನು ಪಾವತಿಸಲು ಸೂಚಿಸುತ್ತಿದ್ದಾರೆ. ಇಂತಹ ಯಾವುದೇ ಬಿಲ್ ಪಾವತಿಸುವ ವ್ಯವಸ್ಥೆ ಬೆಸ್ಕಾಂನಲ್ಲಿಲ್ಲ. ಅಲ್ಲದೆ ಗ್ರಾಹಕರಿಗೆ ಬೆಸ್ಕಾಂ ಬಿಲ್ ಪಾವತಿಸುವ ಕುರಿತಂತೆ ಯಾವುದೇ ಸಂದೇಶ ಅಥವಾ ದೂರವಾಣಿ ಕರೆ ಮಾಡುವುದಿಲ್ಲ. ಗ್ರಾಹಕರು ಇಂತಹ ಕರೆಗಳು ಬಂದ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಮಾಹಿತಿ ನೀಡಲು ಕೋರಲಾಗಿದೆ.