Cricket

ಸಚಿನ್‍ರಂತೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ದೆಹಲಿಯ ರಿಷಭ್ ಪಂತ್!

Published

on

ಸಚಿನ್‍ರಂತೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ದೆಹಲಿಯ ರಿಷಭ್ ಪಂತ್!
Share this

ಬೆಂಗಳೂರು: ಐಪಿಎಲ್‍ನ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಆರ್‍ಸಿಬಿಗೆ ಶರಣಾಗಿದೆ. ಆದರೆ ಡೆಲ್ಲಿ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ರಂತೆ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ.

ಮೂರು ದಿನಗಳ ಹಿಂದಷ್ಟೇ ರಿಷಭ್ ತಂದೆ ರಾಜೇಂದ್ರ ಪಂತ್ ಹೃದಾಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ರಿಷಭ್ ಡೆಲ್ಲಿ ಡೇರ್‍ಡೆವಿಲ್ಸ್ ಕ್ಯಾಂಪ್‍ನಲ್ಲಿ ಐಪಿಎಲ್‍ಗಾಗಿ ಕಠಿಣ ತಾಲೀಮಿನಲ್ಲಿದ್ದರು. ತಂದೆಯ ನಿಧನ ಸುದ್ದಿ ತಿಳಿಯುತ್ತಲೇ ರಿಷಭ್ ಹರಿದ್ವಾರಕ್ಕೆ ದೌಡಾಯಿಸಿದ್ರು. ತಾಯಿ ಸರೋಜ, ಸಹೋದರಿ ಸಾಕ್ಷಿ ಜೊತೆಗೆ ತಂದೆಯ ಅಂತಿಮ ವಿಧಿವಿಧಾನ ಪೂರೈಸಿದ್ದ ರಿಷಭ್‍ಗೆ, ಈ ವೇಳೆ ಕಾಲಿಗೆ ಸುಟ್ಟ ಗಾಯವಾಗಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ರಿಷಭ್ ಚೊಚ್ಚಲ ಐಪಿಎಲ್ ಪ್ರವೇಶ ಸಂಶಯವಾಗಿತ್ತು. ಆದರೆ ತಂದೆಯ ಅಕಾಲಿಕ ಅಗಲುವಿಕೆಯ ಆಘಾತ ಜೊತೆಗೆ ಸುಟ್ಟ ಗಾಯದ ನಡುವೆಯೇ ರಿಷಭ್ ಶುಕ್ರವಾರ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದರು.

ತಂದೆಯ ನಿಧನದ ಆಘಾತ ಅನುಭವಿಸಿದ್ದ ರಿಷಭ್ ತಮ್ಮ ದುಃಖವನ್ನು ಬದಿಗಿಟ್ಟು ತಂಡ ಗೆಲುವಿಗೆ ಪ್ರಯತ್ನಿಸಿದ ರೀತಿ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಆರ್‍ಸಿಬಿ ನೀಡಿದ್ದ 157 ರನ್‍ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡದಲ್ಲಿ ಏಕಾಂಗಿ ಹೋರಾಟ ನಡೆಸಿದ ರಿಷಭ್ ಆಕರ್ಷಕ ಅರ್ಧಶತಕ ದಾಖಲಿಸಿದ್ರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಿಷಭ್ 4 ಸಿಕ್ಸರ್, 3 ಬೌಂಡರಿಗಳನ್ನು ಒಳಗೊಂಡ 57 ರನ್ ಬಾರಿಸಿ ಅಂತಿಮ ಓವರ್‍ನಲ್ಲಿ ನೇಗಿಗೆ ಬೌಲ್ಡ್ ಆದ್ರು.

ಕಣ್ಣಂಚಿನಲ್ಲಿ ಕಣ್ಣೀರು: ಕೊನೆಯ ಓವರ್‍ನಲ್ಲಿ 19 ರನ್‍ಗಳಷ್ಟೇ ಗೆಲುವಿಗೆ ಬೇಕಾಗಿತ್ತು. ರಿಷಬ್ ಅದನ್ನು ಸಾಧಿಸುವ ನಿರೀಕ್ಷೆ ಇತ್ತು. ಆದರೆ ಪವನ್ ನೇಗಿಯ ಪ್ರಥಮ ಎಸೆತದಲ್ಲಿಯೇ ಬೌಲ್ಡ್ ಆಗಿ ಪೆವಿಲಿಯನ್‍ನತ್ತ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದರು. ಅವರ ಕಣ್ಣಂಚಿನಲ್ಲಿ ಜಿನುಗಿದ ಹನಿಗಳು, ಹಣೆಯ ಮೇಲಿನ ಬೆವರು, ಹೊನಲು ಬೆಳಕಿನಲ್ಲಿ ಕ್ಯಾಮರಾ ಕಣ್ಣಲ್ಲಿ ಸ್ಪಷ್ಟವಾಗಿತ್ತು.

1.90 ಕೋಟಿಗೆ ಖರೀದಿ: ರಿಷಭ್ ಪಂತ್ ಹೆಸರು ಮೊದಲ ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದು 2016ರಲ್ಲಿ. 10 ಲಕ್ಷ ಮೂಲಬೆಲೆ ಹೊಂದಿದ್ದ ರಿಷಭ್ ಪಂತ್‍ರನ್ನು 10 ಪಟ್ಟು ಹೆಚ್ಚು ಮೊತ್ತ ಕೊಟ್ಟು ಅಂದರೆ 1.90 ಕೋಟಿಗೆ ಡೆಲಿ ಡೇರ್ ಡೆವಿಲ್ಸ್ ಖರೀದಿಸಿತ್ತು.

ಕಿರಿಯ ಆಟಗಾರ: 19 ವರ್ಷ ವಯಸ್ಸಿನ ರಿಷಭ್ ಕಳೆದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯ ವೇಳೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಚುಟಕು ಫಾರ್ಮೆಟ್‍ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ ಕಿರೀಯ ಆಟಗಾರ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದರು.

ರಣಜಿಯಲ್ಲೂ ದಾಖಲೆ: ಕಳೆದ ಬಾರಿಯ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ 67 ಎಸೆತದಲ್ಲಿ ಶತಕ ದಾಖಲಿಸಿದ್ದ ಪಂತ್, ಅದೇ ಅವಧಿಯಲ್ಲಿ ತ್ರಿಶತಕದ ಗಡಿಯನ್ನೂ ದಾಟಿದ್ದರು. ಇತ್ತೀಚಿಗಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೌತಮ್ ಗಂಭೀರ್ ಬದಲಿಗೆ ರಿಷಭ್ ದೆಹಲಿ ತಂಡವನ್ನು ಮುನ್ನಡೆಸಿ ಗಮನ ಸೆಳೆದಿದ್ದರು.

ಸಚಿನ್ ಶತಕ ಹೊಡೆದಿದ್ರು: 1998ರ ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ವೇಳೆ ಸಚಿನ್ ತೆಂಡೂಲ್ಕರ್ ಅವರ ತಂದೆ ನಿಧನರಾಗಿದ್ದರು. ಈ ಸಂದರ್ಭದಲ್ಲಿ ಅರ್ಧದಲ್ಲೇ ಭಾರತಕ್ಕೆ ಬಂದ ಸಚಿನ್ ತಂದೆಯ ಅಂತ್ಯಕ್ರಿಯೆ ನಡೆಸಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಅಜೇಯ 140 ರನ್(101 ಎಸೆತ, 16 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು. ಈ ಪಂದ್ಯವನ್ನು ಭಾರತ 94 ರನ್‍ಗಳಿಂದ ಗೆದ್ದುಕೊಂಡಿತ್ತು.

https://twitter.com/beingdevil26/status/850755471938129920

https://twitter.com/jhalli_arti/status/850936280649269248

Click to comment

Leave a Reply

Your email address will not be published. Required fields are marked *

Advertisement
Advertisement