– ಶಿವಾನಂದನಗರದ ನ್ಯಾಯಬೆಲೆ ಅಂಗಡಿಯಲ್ಲಿ ಘಟನೆ
ಬೆಂಗಳೂರು: ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಅಕ್ಕಿ ತೆಗೆದುಕೊಳ್ಳಲು 250 ರೂ. ಕೊಡಬೇಕು. ಇಲ್ಲ ಅಂದ್ರೆ ಅಕ್ಕಿ ಕೊಡಲ್ಲ ಎಂದು ನ್ಯಾಯಬೆಲೆ ಅಂಗಡಿಯೊಂದರಲ್ಲಿ ಜನರ ಮೇಲೆ ದರ್ಪ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಜಿಲ್ಲೆಯ ಉತ್ತರ ತಾಲೂಕಿನ ಶಿವಾನಂದ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಅದರ ಸನ್ನದುದಾರರು ತಾವು ಮಾಡಿದ್ದೇ ರೂಲ್ಸ್ ಎಂಬಂತೆ ವರ್ತಿಸಿದ್ದಾರೆ. ಅಕ್ಕಿ ಕೇಳಿದ ಜನರ ಮೇಲೆ ಕೂಗಾಗಿದ್ದಾರೆ. ಇದನ್ನು ಜನರು ವೀಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾರೆ.
ಸರ್ಕಾರ ಉಚಿತವಾಗಿ ನೀಡುವ ಅಕ್ಕಿ ಜೊತೆಗೆ ನ್ಯಾಯಬೆಲೆ ಅಂಗಡಿಯವರು ಕೊಡುವ ಚಿಲ್ಲರೆ ಐಟಂ ತೆಗೆದುಕೊಳ್ಳಲೇಬೇಕು. ಅದಕ್ಕೆ 250 ರೂಪಾಯಿ ನೀಡಬೇಕು. ಇಲ್ಲ ಅಂದರೆ ರೇಷನ್ ಕೊಡಲ್ಲ. ಇದನ್ನು ಯಾರಾದರು ಪ್ರಶ್ನೆ ಮಾಡಿದರೆ ಮುಗೀತು. ಪ್ರಶ್ನಿಸಿದ ಪಡಿತರ ಚೀಟಿದಾರರ ಮೇಲೆ ಸನ್ನದುದಾರ ದರ್ಪ ತೋರಿದ್ದಾರೆ.
ವೀಡಿಯೋದಲ್ಲಿ ಏನಿದೆ?
ಪಡಿತರ ಚೀಟಿದಾರ: ನಾವ್ಯಾಕೆ 250 ರೂಪಾಯಿ ಕೊಡಬೇಕು..?
ರೇಷನ್ ಅಂಗಡಿಯವನು: ಬೇಕಂದ್ರೆ ತಗೊಳ್ಳಿ.. ಬೇಡ ಅಂದ್ರೆ ಹೋಗ್ತಾ ಇರಿ.. ಅವರೆಲ್ಲಾ ಬೆಳಗ್ಗೆಯಿಂದ ನಿಂತಿಲ್ವಾ..?
ಪಡಿತರ ಚೀಟಿದಾರ: ಈಚೆಗೆ ಹೋಗೋದು ಗೊತ್ತು.
ರೇಷನ್ ಅಂಗಡಿಯವನು: ಹೇ ಹೋಗೋ… (ಆಡಿಯೋ ಮ್ಯೂಡಿ ಮಾಡಿ) ಏನಕ್ಕೆ ವಿಡಿಯೋ ಮಾಡ್ತಿಯಾ, ಇಳ್ಸೋ..
ಪಡಿತರ ಚೀಟಿದಾರ: ಏನಕ್ಕೆ ನಿಲ್ಲಿಸಬೇಕು..
ರೇಷನ್ ಅಂಗಡಿಯವನು: ಅಂಗಡಿ ನಮ್ದೋ.. ತಗೋಳಂಗಿದ್ರೆ ತಗೋ.. ಇಲ್ಲ ಏನ್ ಮಾಡ್ತಿಯಾ ಮಾಡೋ..
ಪಡಿತರ ಚೀಟಿದಾರ: ನಮಗೆ ಬೇಡ ಅಂತಿಲ್ವಾ, ಗೌರ್ಮೆಂಟ್ ಏನ್ ಕೊಟ್ಟಿದೆಯೋ ಕೊಡಿ…
ರೇಷನ್ ಅಂಗಡಿಯವ: ಅದು ಎಲ್ಲಿ ಹಾಕ್ತಿಯೋ ಹಾಕ್ಕೋ ಹೋಗು.. 250 ರೂ.ಗೆ ತಗೋ ಅಂದಿದ್ದು.
ಪೀಣ್ಯ ಅಂದ್ರಳ್ಳಿ ಭಾಗದಲ್ಲಿ ಬರುವ ಶಿವನಾಂದನಗರದ ರೇಷನ್ ಅಂಗಡಿಯ ಮಾಲೀಕ ಕಾಳೇಗೌಡ ಅಂತ. ಮೊದಲು ಐಟಮ್ ತಗೋತ್ತಾರೆ. ಆಮೇಲೆ 200 ಕೊಡಿ ಅಂತಾರೆ. ಇಷ್ಟು ತಿಂಗಳು 200 ರೂಪಾಯಿ ತಗೊಂಡು ಅದಕ್ಕೆ ಬೇಡದೇ ಇರೋ ಸೋಪು, ಉಪ್ಪು, ಗೋಧಿಹಿಟ್ಟು ಕೊಡ್ತಾರೆ. ಹಣ ಕೊಡಲ್ಲ ಅಂದ್ರೆ ಸರ್ಕಾರದ ಉಚಿತ ರೇಷನ್ ಕೂಡ ಇಲ್ಲ ಅಂತಾರೆ. ಈ ತಿಂಗಳಿಂದ 250 ರೂ. ಕೊಡಬೇಕಂತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ರೆ ಕೈ ಮಾಡಲು ಬರ್ತಾರೆ ಅಂತ ತಮ್ಮ ಅಸಹಾಯಕತೆಯನ್ನು ಪಡಿತರ ಚೀಟಿದಾರ ಹೇಳಿಕೊಂಡಿದ್ದಾರೆ.