ಶಿವಮೊಗ್ಗ: ಹೊಸನಗರ (Hosanagar) ತಾಲೂಕಿನ ಅಬ್ಬಿ ಫಾಲ್ಸ್‌ನಲ್ಲಿ (Abbi Falls) ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ನೀರುಪಾಲಾಗಿದ್ದಾನೆ.
ಮೃತನನ್ನು ಬೆಂಗಳೂರಿನ (Bengaluru) ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (35) ಎಂದು ಗುರುತಿಸಲಾಗಿದೆ. ತಮ್ಮ ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅಬ್ಬಿ ಫಾಲ್ಸ್‌ನಲ್ಲಿ ಫೋಟೋಗೆ ಪೋಸ್ ನೀಡುವಾಗ ಫಾಲ್ಸ್‌ಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಫಾಲ್ಸ್‌ನಲ್ಲಿ ರಮೇಶ್ ಕಣ್ಮರೆಯಾಗುವ 20 ಸೆಕೆಂಡ್‌ನ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ರಮೇಶ್ ಬಂಡೆ ಮೇಲೆ ಕುಳಿತಿರುತ್ತಾರೆ. ವಿಡಿಯೋದ ಆರಂಭದಲ್ಲಿ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಸಂಭ್ರಮಿಸುತ್ತಾರೆ. ನಂತರ ತಾನು ಕುಳಿತಿದ್ದ ಬಂಡೆಯಿಂದ ಕೆಳಗಿಳಿಯುತ್ತಾರೆ. ಈ ವೇಳೆ, ನೀರಿನ ರಭಸಕ್ಕೆ ರಮೇಶ್ ತೇಲಿ ಹೋಗಿದ್ದಾರೆ. ಕೊಚ್ಚಿಹೋಗುತ್ತಿದ್ದಂತೆ ಸ್ನೇಹಿತರು ಕೂಗಿಕೊಳ್ಳುವುದು ವಿಡಿಯೋ ರೆಕಾರ್ಡ್ ಆಗಿದೆ.
ಘಟನೆಯ ಬಳಿಕ ರಮೇಶ್ ಮೃತದೇಹವು ಫಾಲ್ಸ್‌ನ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.