– ಗಾಯಾಳು ಸಚಿನ್ ಆರೋಪ
ಬೆಂಗಳೂರು: ತುಮಕೂರಿನ ತುರುವೆಕೆರೆಯ ಮುಗಳೂರು ಗ್ರಾಮದಲ್ಲಿ ಜನವರಿ 9 ರಂದು ನಡೆದ ಮಾರಾಮಾರಿ ಪ್ರಕರಣಕ್ಕೆ ನಯಾ ಟ್ವಿಸ್ಟ್ ಸಿಕ್ಕಿದೆ.
ಕ್ಷುಲ್ಲಕ ಕಾರಣಕ್ಕೆ ಸಚಿನ್ ಎಂಬ ಯುವಕನ ಕೈ ಕಟ್ ಮಾಡಿದ್ದ ಪ್ರಕರಣದ ಹಿಂದೆ ಗ್ರಾ.ಪಂಚಾಯ್ತಿ ಸದಸ್ಯ ಹಾಗೂ ಆತನಿಗೆ ಸ್ಥಳೀಯ ಶಾಸಕನ ಕೃಪಾಕಟಾಕ್ಷವಿದೆ ಅನ್ನೋ ಆರೋಪ ಕೇಳಿ ಬಂದಿದೆ. ಗ್ರಾಮದಲ್ಲಿ ಹವಾ ಹೆಚ್ಚಿಸಿಕೊಳ್ಳಲು ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹನೇ ಈ ಕೃತ್ಯ ಮಾಡಿಸಿದ್ದಾನೆ ಅಂತ ಗಾಯಾಳು ಸಚಿನ್ ಆರೋಪಿಸಿದ್ದಾನೆ.
ಅಂದು ನಾಯಿ ವಿಚಾರಕ್ಕೆ ಲೇಪಾಕ್ಷಿ ಹಾಗೂ ಸಚಿನ್ ನಡುವೆ ಗಲಾಟೆಯಾಗಿತ್ತು. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಇಬ್ಬರಿಗೆ ಬುದ್ಧಿವಾದ ಹೇಳಿ ಗಲಾಟೆ ನಿಲ್ಲಿಸಿದ್ದರು. ನಂತರ ಮತ್ತೆ ಗಲಾಟೆಯಾಗಿತ್ತು. ಆಗ ಸಚಿನ್ ನ ಎಡಗೈ ಮುಂಗೈಯನ್ನ ಲೇಪಾಕ್ಷಿ ಕಟ್ ಮಾಡಿದ್ದನು. ಈ ವೇಳೆ ಲೇಪಾಕ್ಷಿ ಜೊತೆ ಚೇತನ್ ಕೂಡ ಇದ್ದ. ಗ್ರಾಮದಲ್ಲಿ ಬೇರೆಯವರ ಬೆಳವಣಿಗೆ ಸಹಿಸದೇ ಮುಗಳೂರು ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹನ ಶಿಷ್ಯರಿಂದ ಈ ಹಲ್ಲೆ ಮಾಡಲಾಗಿದೆ ಅಂತ ಗಾಯಾಳು ಸಚಿನ್ ಆರೋಪ ಮಾಡಿದ್ದಾನೆ.
ಜನವರಿ 9 ರ ಹಲ್ಲೆಗೂ ಕೆಲ ದಿನಗಳ ಹಿಂದೆ, ನರಸಿಂಹ ಹಾಗೂ ಟೀಂ ಮತ್ತೊಬ್ಬನ ಕಾಲು ಮುರಿದಿದ್ದರು. ಬೆಂಗಳೂರಿನ ಹಲವು ಠಾಣೆಗಳಲ್ಲಿ ಗ್ರಾ.ಪಂ. ಸದಸ್ಯನ ಮೇಲೆ ಪ್ರಕರಣಗಳು ದಾಖಲಾಗಿದ್ದು, ಸ್ಥಳೀಯ ಶಾಸಕನ ಕೃಪಾ ಕಟಾಕ್ಷದಿಂದ ನರಸಿಂಹನಿಗೆ ಯಾರೂ ಎದುರು ಮಾತನಾಡ್ತಿರಲಿಲ್ಲ ಎನ್ನಲಾಗಿದೆ.
ಘಟನೆಯಲ್ಲಿ ಕೈ ಕಳೆದುಕೊಂಡ ಸಚಿನ್ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ತುರುವೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.