ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

Public TV
3 Min Read
Facebook dookha

-ಖಾಸಗಿ ಫೋಟೋ ತೋರ್ಸಿ ಬ್ಲ್ಯಾಕ್‍ಮೇಲ್
-ಲವ್, ಸೆಕ್ಸ್, ದೋಖಾ ಪ್ರಕರಣ
-ದೂರವಾದ್ರೆ ಕೊರಿಯರ್‌ನಲ್ಲಿ ಕಾಂಡೋಮ್ ಕಳಿಸ್ತಾನೆ

ಬೆಂಗಳೂರು: ಫೇಸ್‍ಬುಕ್‍ನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಮೋಸ ಮಾಡುತ್ತಿದ್ದ ಕಾಮುಕನ ವಿರುದ್ಧ ನಗರದ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತೆ ಯುವತಿ ಈ ಸಂಬಂಧ ಮಾನವ ಹಕ್ಕು ಆಯೋಗ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ದೇವನಹಳ್ಳಿ ಬಳಿಯ ವಿಜಯಪುರದ ನಿವಾಸಿ ಕೇಶವ್ ಫೇಸ್‍ಬುಕ್ ಮೂಲಕ ವಂಚನೆ ಮಾಡಿದ ಕಾಮುಕ. ಆರೋಪಿ ಕೇಶವ್ ಫೇಸ್‍ಬುಕ್‍ನಲ್ಲಿ ಪರಿಚಯವಾದ ಯುವತಿಯರಿಗೆ ಪ್ರೀತಿಸುವ ನಾಟಕವಾಡಿ, ವಂಚನೆ ಮಾಡುತ್ತಿದ್ದ. ಇದೇ ರೀತಿ 20 ಯುವತಿಯರಿಗೆ ದೋಖಾ ಮಾಡಿದ್ದಾನೆ ಎಂಬ  ಆರೋಪ ಕೇಳಿಬಂದಿದೆ.

Facebook dookha B

ಕೇಶವ್ ತನ್ನ ಫೇಸ್‍ಬುಕ್ ಖಾತೆಯ ಮೂಲಕ ಸುಂದರ  ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಈತನ ಫೋಟೋ ನೋಡಿದ ಯುವತಿಯರು ಮರು ಕ್ಷಣವೇ ರಿಕ್ವೆಸ್ಟ್ ಸ್ವೀಕರಿಸುತ್ತಿದ್ದರು. ನಂತರ ಕೇಶವ್, ಯುವತಿಯನ್ನು ಚಿನ್ನ, ರನ್ನ ಅಂದೆಲ್ಲಾ ವರ್ಣಿಸುತ್ತಿದ್ದ. ಬಳಿಕ ಫೋನ್ ನಂಬರ್ ಪಡೆದು ಚಾಟಿಂಗ್ ಆರಂಭಿಸುತ್ತಿದ್ದ.

ಕೇಶವ್ ಪರಿಚಯವಾದ ಯುವತಿಯ ಜೊತೆಗೆ ಕೆಲ ದಿನ ಫೋನ್‍ನಲ್ಲೇ ಚಾಟಿಂಗ್, ಕಾಲ್ ಮಾಡಿ ಹತ್ತಿರವಾಗುತ್ತಿದ್ದ. ಬಳಿಕ ಭೇಟಿಯಾಗಲು ಕರೆದು ದೈಹಿಕ ಸಂಪರ್ಕ ಕೂಡ ಬೆಳೆಸುತ್ತಿದ್ದ. ಈ ವೇಳೆಯೇ ಖಾಸಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಭೂಪ, ಅಮಾಯಕ ಯುವತಿಯರಿಗೆ ಮದುವೆ ಆಗುತ್ತೇನೆ ಅಂತ ಹೇಳಿ ನಂಬಿಸುತ್ತಿದ್ದ.

Condom 4 1

ಆರೋಪಿ ಕೇಶವ್ ಯುವತಿಯರ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಹಣ ಕೊಡುವಂತೆ ಯುವತಿಯರಿಗೆ ಬೇಡಿಕೆ ಇಡುತ್ತಿದ್ದ. ಒಂದು ವೇಳೆ ಯುವತಿಯರು ಹಣ ನೀಡದಿದ್ದಾಗ ಆಕೆಯ ಸಂಬಂಧಿಕರಿಗೆ, ಗಂಡನಿಗೆ ಫೋಟೋ ಕಳುಹಿಸುತ್ತಿದ್ದ. ಇದಕ್ಕೂ ಒಪ್ಪದಿದ್ದಾಗ ಯುವತಿಯ ಮನೆಗೆ ಫೋಟೋ ಕೊರಿಯರ್ ಮಾಡುತ್ತಿದ್ದ. ಇದೇ ರೀತಿ ಫೇಸ್‍ಬುಕ್‍ನಲ್ಲಿ ಪರಿಚಯವಾದ 20 ಯುವತಿಯರಿಗೆ ದೋಖಾ ಮಾಡಿದ್ದಾನೆ.

ಮದುವೆಯಾದ ಮಹಿಳೆಯರೇ ಟಾರ್ಗೆಟ್:
ಕಾಮುಕ ಕೇಶವ್ ಓರ್ವ ಯುವತಿಯನ್ನು ಮೂರು ವರ್ಷದಿಂದ ಪ್ರೀತಿಸುವ ಡ್ರಾಮಾ ಮಾಡಿದ್ದ. ಬಳಿಕ ಆತನ ಚಪಲ ಚನ್ನಿಗರಾಯನ ಆಟ ಯುವತಿಗೆ ಗೊತ್ತಾಗಿತ್ತು. ಕೇಶವ್ ನಿಂದ ದೂರ ಉಳಿದಿದ್ದ ಆಕೆಯು ಬೇರೆ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದಳು. ಆದರೆ ಕಾಮುಕ ಕೇಶವ್ ಭೇಟಿಯಾಗುವಂತೆ ಕಾಡಿಸುತ್ತಿದ್ದ. ಕೊನೆಗೆ ಯುವತಿ ಬರಲು ಒಪ್ಪದಿದ್ದಾಗ ಆಕೆಯ ಮನೆಗೆ ಕೊರಿಯರ್ ಮೂಲಕ ಕಾಂಡೋಮ್ ಕಳುಹಿಸಿದ್ದ. ಕಾಮುಕನ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಮಹಿಳೆಯು ಮಾನವ ಹಕ್ಕು ಆಯೋಗ ಹಾಗೂ ಬಾಗಲೂರು ಠಾಣೆಗೆ ದೂರು ನೀಡಿದ್ದಾಳೆ.

facebook logo

ಕೇಶವ್ ನನಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ. ನವೆಂಬರ್ 2016ರಿಂದ ಏಪ್ರಿಲ್ 2017ರವರೆಗೆ ಇಬ್ಬರು ಪರಸ್ಪರ ಪ್ರೀತಿಸಿದ್ದೇವು. ಆದರೆ ಕೇಶವ್ ಮನೆ ಬಿಟ್ಟು ಬರುವಂತೆ ನನ್ನನ್ನು ಒತ್ತಾಯಿಸಿದ್ದ. ಅಷ್ಟೇ ಅಲ್ಲದೆ ಮನೆಯಲ್ಲಿದ್ದ ಚಿನ್ನಾಭರಣ, ಹಣ ತೆಗೆದುಕೊಂಡು ಬರುವಂತೆ ಪೀಡಿಸಿದ್ದ. ಮಾನಸಿಕ ವ್ಯಕ್ತಿಯಂತೆ ವರ್ತಿಸಲು ಶುರು ಮಾಡಿದ್ದ ಕೇಶವ್ ನಿಂದ ದೂರವಾಗಲು ಯತ್ನಿಸಿದೆ. ಆದರೆ ಅವನು ಗೆಳೆಯರ ಜೊತೆಗೆ ಬಂದು ಮನೆ ಮುಂದೆ ನಿಂತು ನನ್ನ ಹೆಸರನ್ನು ಕೂಗಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಸುಮಾರು ಒಂದು ವರ್ಷ ದೂರ ಉಳಿದಿದ್ದ ಕೇಶವ್ ಮತ್ತೆ ಕಿರುಕುಳ ಕೊಡಲು ಆರಂಭಿಸಿದ್ದಾನೆ. ನನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮನೆಗೆ, ಸಂಬಂಧಿಕರಿಗೆ ಹಾಗೂ ನನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಫೋನ್ ನಂಬರ್ ಕೂಡ ಹಂಚಿಕೊಂಡಿದ್ದಾನೆ. ಕೇಶವ್ ತನ್ನ ಗೆಳೆಯರಾದ ಸೈಯದ್ ಫಯಾಸ್ ಸೈಫಿ ಅಲಿಯಾ ಆ್ಯಸಿಡ್ ಫೈಯಾಸ್, ಸೈಯದ್ ರಫೀಕ್ ಅಲಿಯಾಸ್ ಚಾಕು ರಫೀಕ್, ಗಣೇಶ್ ಅಲಿಯಾಸ್ ಗನ್ ಗಣೇಶ್, ಮೆಂಟಲ್ ಮೋನಿ, ಬ್ಲೇಡ್ ಪುರುಷೋತ್ತಮ್, ಪದ್ಮನಾಭ್ ಜಿಆರ್, ಮಂಜು, ಸಂತೋಷ್ ಸೇರಿದಂತೆ ಅನೇಕರಿಂದ ನನಗೆ ಬೆದರಿಕೆ ಒಡ್ಡುತ್ತಿದ್ದಾನೆ. ನನ್ನ ಮಗನ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

Facebook dookha A

ಕಾಮುಕ ಕೇಶವ್ ಫ್ಲಿಪ್‍ಕಾರ್ಟ್ ಸೇರಿದಂತೆ ವಿವಿಧ ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್ ಮೂಲಕ ಮನೆಗೆ ಕಾಂಡೋಮ್ ಪ್ಯಾಕ್ ಕಳಿಸಿದ್ದಾನೆ. ನಾನು ಒಬ್ಬಳೆ ಮನೆಯಲ್ಲಿದ್ದಾಗ ಗುಂಡಾಗಳನ್ನು ಕಳಿಸಿ, ದೈಹಿಕವಾಗಿ ಹಲ್ಲೆ ಮಾಡಿಸಿದ್ದಾನೆ. ಆರೋಪಿಗೆ ಅನೇಕ ಕೆಟ್ಟ ಚಟಗಳಿದ್ದು, ಅನೇಕ ಯುವತಿಯರಿಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಆರೋಪಿ ಕೇಶವ್ ಅಣ್ಣ ಕೂಡ ರೌಡಿಶೀಟರ್ ಆಗಿದ್ದು, ಕೊಲೆ ಮಾಡಿ ಜೈಲು ಸೇರಿದ್ದಾನೆ. ಯಾವುದೇ ಕೆಲಸವಿಲ್ಲದೆ ತಿರುಗಾಡುತ್ತಿದ್ದ ಕಾಮುಕ ಕೇಶವ್, ತಾನು ಟಿಂಬರ್ ಬ್ಯುಸಿನೆಸ್ ಮಾಡುತ್ತಿದ್ದೇನೆ ಅಂತ ಹೇಳಿಕೊಂಡು ಯುವತಿಯರನ್ನು ಪಟಾಯಿಸುತ್ತಿದ್ದ. ಮದುವೆಯಾಗಿ ಹೆಂಡತಿ, ಮಕ್ಕಳಿದ್ದರೂ ನೀಚ ಕೃತ್ಯಕ್ಕೆ ಎಸಗುತ್ತಿದ್ದ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದರು. ಆದರೆ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

Police Jeep

Share This Article
Leave a Comment

Leave a Reply

Your email address will not be published. Required fields are marked *