ನಿಯಮ ಉಲ್ಲಂಘನೆ ಆರೋಪ – ಸಿಎಂ ಸತ್ಯದ ಪರ ನಿಂತಿದ್ದಾರೆ: ಎಚ್‍ಡಿಕೆ

Public TV
1 Min Read
BSY HDK

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಸತ್ಯದ ಪರನಿಂತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ನಿಯಮ ಪಾಲಿಸಿದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿದವು. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ ಎಂದು ಹೆಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

ಮಗನ ಮದುವೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ನನ್ನ ಒಡನಾಡಿಗಳು, ನನ್ನ ಹಿತೈಷಿಗಳು, ನನ್ನ ಜನ, ನನ್ನ ಕಾರ್ಯಕರ್ತರು ಇವರೆಲ್ಲರೊಂದಿಗೆ ಶುಭ ಸಮಾರಂಭವೊಂದರಲ್ಲಿ ಒಟ್ಟಿಗೆ ಸೇರಲು ವೈಯಕ್ತಿಕವಾಗಿ ನನಗೆ ಇದ್ದ ಒಂದೇ ಒಂದು ಸುವರ್ಣ ಅವಕಾಶವನ್ನು ಕೈಚೆಲ್ಲಿ ನಿಖಿಲ್ ವಿವಾಹವನ್ನು ಲಾಕ್‍ಡೌನ್ ನಿಯಮಗಳನ್ನು ಪಾಲಿಸಿ ಸರಳವಾಗಿ ಮಾಡಲಾಯಿತು ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.

ನಿಖಿಲ್ ವಿವಾಹದಲ್ಲೂ ರಾಜಕೀಯ ಹುಡುಕಿದ `ಸಾಮಾಜಿಕ ಮಾಧ್ಯಮ’ದ ಕೆಲವು ಹುಳುಕು ಮನಸ್ಸಿನ ಮಂದಿ ತಮ್ಮ ಮನದಲ್ಲಿರುವ ವಿಷ ಕಾರಿಕೊಂಡಿದ್ದಾರೆ. ಅವರೆಲ್ಲರೂ ಶರಣರ ಈ ಮಾತನ್ನು ನೆನಪಲ್ಲಿಟ್ಟುಕೊಳ್ಳಬೇಕು. “ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ. ನೆರೆಮನೆಯ ಸುಡದು ಕೂಡಲಸಂಗಮದೇವಾ” ಎಂದು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.

ರಾಜ್ಯರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ವಿವಾಹ ಸಮಾರಂಭ ಮಾಡಿದೆ ಎಂದೂ ಯಡಿಯೂರಪ್ಪ ಅವರು ಸಹೃದಯದ ಮಾತುಗಳನ್ನಾಡಿರುವುದಕ್ಕೆ ಅವರಿಗೆ ಮನದಾಳದ ಧನ್ಯವಾದಗಳು ಎಂದು ಟ್ವೀಟ್ ಮಾಡುವ ಮೂಲಕ ಯಡಿಯೂರಪ್ಪನವರಿಗೂ ಹೆಚ್ಡಿಕೆ ಧನ್ಯವಾದ ತಿಳಿಸಿದ್ದಾರೆ.

ಬಿಎಸ್‍ವೈ ಹೇಳಿದ್ದೇನು?
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಪುತ್ರನ ಮದುವೆಗೆ ಅನುಮತಿ ಕೊಡಲಾಗಿತ್ತು. ಅವರು ಸರಳವಾಗಿ ಮದುವೆ ಮಾಡಿದ್ದಾರೆ. ಅವರ ಕುಟುಂಬ ದೊಡ್ಡದಿದ್ದರೂ ಹೆಚ್ಚು ಜನರನ್ನು ಸೇರಿಸದೆ ಮದುವೆ ಕಾರ್ಯ ಮುಗಿಸಿದ್ದಾರೆ. ಹೀಗಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಈಗ ಕುಮಾರಸ್ವಾಮಿ ಪುತ್ರನ ಮದುವೆ ಚರ್ಚೆ ಅಪ್ರಸ್ತುತ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *