ಬೆಂಗಳೂರು: ಚಿತ್ರರಂಗದ ಬಹು ವರ್ಷಗಳ ಕನಸು ಕೊನೆಗೂ ಈಡೇರುವ ಕಾಲ ಸನ್ನಿತವಾಗಿದೆ. ಚಿತ್ರರಂದ ಬಹು ಬೇಡಿಕೆಯ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಅಂತಿಮ ಮುದ್ರೆ ಒತ್ತಿದ್ದು, ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷವೇ ಫಿಲ್ಮ್ ಸಿಟಿ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡುವ ಭರವಸೆಯನ್ನು ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ಸಿನ ಸದಸ್ಯೆ ಜಯಮಾಲ ಫಿಲ್ಮ್ ಸಿಟಿ ಬಗ್ಗೆ ಪ್ರಶ್ನೆ ಕೇಳಿದರು. ಅನೇಕ ವರ್ಷಗಳಿಂದ ಫಿಲ್ಮ್ ಸಿಟಿ ಕೇವಲ ಪುಸ್ತಕದಲ್ಲಿ ಇದೆ. ಸಿದ್ದರಾಮಯ್ಯ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ರಾಮನಗರದಲ್ಲಿ ಮಾಡುವುದಾಗಿ ಹೇಳಿದ್ದರು. ಎಲ್ಲವೂ ಕೇವಲ ಘೋಷಣೆ ಆಗಿಯೇ ಉಳಿದಿವೆ. ಯಡಿಯೂರಪ್ಪನವರಾದರೂ ಫಿಲ್ಮ್ ಸಿಟಿ ಕನಸನ್ನು ನನಸು ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಸಂದೇಶ್ ನಾಗರಾಜ್ ಮೈಸೂರಿನಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ. ಅಲ್ಲೇ ಫಿಲ್ಮ್ ಸಿಟಿ ಮಾಡುವಂತೆ ಸಿಎಂ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದರು.
ಸದಸ್ಯರ ಪ್ರಶ್ನೆಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ಕೊಟ್ಟರು. ಫಿಲ್ಮ್ ಸಿಟಿಗಾಗಿ ಈ ಬಜೆಟ್‍ನಲ್ಲಿ 500 ಕೋಟಿ ಹಣ ಇಟ್ಟಿದ್ದೇನೆ. ಬೆಂಗಳೂರಿನಲ್ಲಿ 150 ಎಕರೆ ಜಾಗ ಕೂಡ ಗುರುತಿಸಲಾಗಿದೆ. ನಾವೆಲ್ಲರೂ ಏಪ್ರಿಲ್ ಮೊದಲ ವಾರ ಸ್ಥಳ ಪರಿಶೀಲನೆ ಮಾಡಿ ಜಾಗ ಒಪ್ಪಿಗೆ. ಆದರೆ ಈ ವರ್ಷವೇ ಫಿಲ್ಮ್ ಸಿಟಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ತಿಳಿಸಿದರು.
ಸಂದೇಶ್ ನಾಗರಾಜ್ ಮನವಿ ತಿರಸ್ಕಾರ ಮಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ಸ್ಥಾಪನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಸ್ಪಷ್ಟಪಡಿಸಿದರು.