– ಸಿಎಂಗೆ ಮಹಿಳೆ ಮನವಿ
ಬೆಂಗಳೂರು: ಮದ್ಯದಂಗಡಿ ಯಾವಾಗ ತೆರೆಯುತ್ತದೆ ಅಂತ ಕಾಯುತ್ತಿದ್ದಾರೆ. ಇತ್ತ ಬಾರ್, ರೆಸ್ಟೋರೆಂಟ್ ಮಾಲೀಕರು ಬಿಯರ್ ಎಕ್ಸ್‌ಪೈರಿ ಆಗುತ್ತದೆ. ಹೀಗಾಗಿ ವ್ಯಾಪರಕ್ಕೆ ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಮಹಿಳೆಯೊಬ್ಬರು ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬೇಡಿ ಎಂದು ಮನವಿ ಸಲ್ಲಿಸಿದ್ದಾರೆ.
ಮಹಿಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ವೈರಲ್ ಆಗಿದೆ. ”ಮುಖ್ಯಮಂತ್ರಿಗಳಿಗೆ ನನ್ನದೊಂದು ಮನವಿ. ಎಣ್ಣೆ ಅಂಗಡಿ ತೆರೆಯಲು ಅವಕಾಶ ನೀಡಬೇಡಿ. ಏಕೆಂದರೆ ಮದ್ಯ ಕುಡಿದು ನಮ್ಮ ಅಪ್ಪ-ಅಮ್ಮ ದಿನವೂ ಜಗಳವಾಡುತ್ತಾರೆ. ಅಷ್ಟೇ ಅಲ್ಲದೆ ಗಲಾಟೆ ಮಾಡಿ ಅಕ್ಕಪಕ್ಕದವರಿಗೆ ತೊಂದರೆ ಕೊಡುತ್ತಾರೆ. ಹೀಗಾಗಿ ನೆರೆಮನೆಯವರು ರಾತ್ರೋರಾತ್ರಿ ನಮಗೆ ಫೋನ್ ಮಾಡಿ ನಿಮ್ಮ ಪೋಷಕರು ಗಲಾಟೆ ಮಾಡುತ್ತಿದ್ದಾರೆ ಅಂತ ದೂರುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.
ನಾನು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವೆ. ನನಗೆ ಬರುವ ಸಂಬಳದಲ್ಲಿ ಅರ್ಧದಷ್ಟು ಹಣವನ್ನ ಸರ್ಕಾರಕ್ಕೆ ಕೊಡುತ್ತೇನೆ. ದಯವಿಟ್ಟು ಎಣ್ಣೆ ಅಂಗಡಿ ತೆರೆಯಲು ಅವಕಾಶ ಕೊಡಬೇಡಿ. ಈ ಕಾಲಕ್ಕೆ ನಾವು ಅನುಭವಿಸುತ್ತಿರುವುದು ಸಾಕು. ನಮ್ಮ ಮಕ್ಕಳ ಕಾಲದಲ್ಲಿ ಎಣ್ಣೆಯಿಂದ ಯಾವುದೇ ತೊಂದರೆ ಆಗದೇ ಇರಲಿ ಎನ್ನುವುದು ಅನ್ನ ಅಭಿಪ್ರಾಯ ಎಂದು ಮಹಿಳೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಮದ್ಯದಂಗಡಿ ತೆರೆಯುವ ವಿಚಾರವಾಗಿ ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ್ದ ಕಂದಾಯ ಸಚಿವ ಅಶೋಕ್, ಎಣ್ಣೆ ನಮ್ಮದಲ್ಲ, ಊಟ ಮಾತ್ರ ನಮ್ಮದು. ಎಣ್ಣೆ ನಿಮ್ಮದು, ಊಟ ನಮ್ಮದು. ಸದ್ಯಕ್ಕೆ ಎಣ್ಣೆ ಬೇಡವೇ ಬೇಡ. ಎಣ್ಣೆ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಷ್ಟೇ ಆಗೋದು. ಈಗ ಏನಾದ್ರೂ ನಾವು ಎಣ್ಣೆ ಬಿಟ್ಟರೆ ಕೊಟ್ಟಿರೋ ರೇಷನ್ ಎಲ್ಲಾ ಹೋಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಸದ್ಯ ಎಣ್ಣೆ ವಿಚಾರ ಬೇಡವೇ ಬೇಡ ಎಂದು ಹೇಳಿದ್ದರು.