– ಲಾಕ್‍ಡೌನ್‍ನಿಂದ 2ನೇ ಪತ್ನಿ ಮನೆಯಲ್ಲೇ ಸಿಲುಕಿದ ಪತಿರಾಯ
ಬೆಂಗಳೂರು: ಪತಿಯನ್ನು ಎರಡನೇ ಹೆಂಡತಿಯ ಮನೆಯಿಂದ ಕರೆದುಕೊಂಡು ಬನ್ನಿ ಎಂದು ಮಹಿಳೆಯೊಬ್ಬರು ಬೆಂಗಳೂರು ಪೊಲೀಸರಿಗೆ ದುಂಬಾಲು ಬಿದ್ದಿರುವ ವಿಚಿತ್ರ ಘಟನೆ ಲಾಕ್‍ಡೌನ್ ಸಮಯದಲ್ಲಿ ನಡೆದಿದೆ.
ಕೊರೊನಾ ಭಯದಿಂದ ಪ್ರಧಾನಿ ಮೋದಿ ಅವರು ಭಾರತವನ್ನು ಲಾಕ್‍ಡೌನ್ ಮಾಡಿ, ಯಾರೂ ಹೊರಗೆ ಬಾರದಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರು ವಿಚಿತ್ರವಾದ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅದರಂತೆ ಬೆಂಗಳೂರಿನ ಮಹಿಳೆಯೊಬ್ಬರು ಬೆಂಗಳೂರು ಪೊಲೀಸರಿಗೆ ಕರೆ ಮಾಡಿ ತನ್ನ ಗಂಡನನ್ನು ಮನೆಗೆ ಕರೆದುಕೊಂಡು ಬನ್ನಿ, ನಾನು ಆಹಾರ ಸಾಮಗ್ರಿ ತರಲು ಹೊರಗೆ ಹೋಗಬೇಕು ಎಂದು ಕೋರಿಕೊಂಡಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ 40 ವರ್ಷದ ಉಮೇಶ್ (ಹೆಸರು ಬದಲಾಯಿಸಲಾಗಿದೆ) 35 ವರ್ಷದ ಸುಧಾಳನ್ನು (ಹೆಸರು ಬದಲಾಯಿಸಲಾಗಿದೆ) 10 ವರ್ಷದ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗು ಕೂಡ ಇದೆ. ಆದರೆ ಉಮೇಶ್ ಮದುವೆಯ ನಂತರ ನಿಧಿ (ಹೆಸರು ಬದಲಾಯಿಸಲಾಗಿದೆ) ಎಂಬವರ ಜೊತೆ ಅಕ್ರಮ ಸಂಬಂಧ ಹೊಂದಿದ್ದನು.
Advertisement
Advertisement
ಉಮೇಶ್‍ನ ಈ ವಿಚಾರ ಒಂದು ದಿನ ಸುಧಾಗೆ ಗೊತ್ತಾಗಿತ್ತು. ಇದಾದ ನಂತರ ಸುಧಾ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ವಾಪಸ್ ಕರೆದುಕೊಂಡು ಬಂದ ಉಮೇಶ್ ಇಬ್ಬರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದ. ಜೊತೆಗೆ ನಾನು ಸುಧಾಳನ್ನು ಮದುವೆಯಾಗಿರುವ ವಿಚಾರವನ್ನು ನಿಧಿಗೂ ಹೇಳಿ ಒಪ್ಪಿಸಿದ್ದ. ಹಿರಿಯರ ಸಮ್ಮುಖದಲ್ಲಿ ನ್ಯಾಯ ಮಾಡಿ ಇಬ್ಬರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಒಂದು ವಾರ ಒಬ್ಬಳ ಮನೆ ಇನ್ನೊಂದು ವಾರ ಇನ್ನೊಬ್ಬಳ ಮನೆಯಲ್ಲಿ ಇರುತ್ತಾನೆ ಎಂದು ಮಾತುಕೊಟ್ಟಿದ್ದ.
ಇದಾದ ನಂತರ ಮಾರ್ಚ್ 21 ರಂದು ನಿಧಿ ಮನೆಯಲ್ಲಿ ಇದ್ದ ಉಮೇಶ್ ನಂತರ ಲಾಕ್‍ಡೌನ್ ಘೋಷಣೆಯಾದ ಕಾರಣ ಅಲ್ಲೇ ಉಳಿದಿದ್ದ. ಆದರೆ ಕೊಟ್ಟ ಮಾತಿನಂತೆ ಮಾರ್ಚ್ 28ರಂದು ಉಮೇಶ್ ಸುಧಾಳ ಮನೆಗೆ ಹೋಗಬೇಕಿತ್ತು. ಆದರೆ ಹೊರಗೆ ಹೋದರೆ ಪೊಲೀಸರು ಹಿಡಿದುಕೊಳ್ಳುತ್ತಾರೆ. ನಾನು ಹೇಗಾದರೂ ಮಾಡಿ ಬರುತ್ತೇನೆ ಎಂದು ಸುಧಾಳಿಗೆ ಭರವಸೆ ನೀಡಿದ್ದ. ಆದರೆ ಎಷ್ಟೇ ಪ್ರಯತ್ನಿಸಿದರೂ ಆತನಿಗೆ ಪೊಲೀಸರು ಮನೆಯಿಂದ ಹೊರಗೆ ಹೋಗಲು ಬಿಡಲಿಲ್ಲ.
ಈ ಕಡೆ ಪತಿಗಾಗಿ ಕಾಯುತ್ತಿದ್ದ ಸುಧಾ, ಉಮೇಶ್ ಬರಲಿಲ್ಲ ಎಂದು ಕೋಪಿಸಿಕೊಂಡಿದ್ದಳು. ಮನೆಗೆ ದಿನಬಳಕೆ ವಸ್ತುಗಳನ್ನು ತರಬೇಕು. ನನ್ನನ್ನು ಹೊರಗೆ ಕರೆದುಕೊಂಡು ಹೋಗು ಬಾ ಎಂದು ಉಮೇಶ್‍ಗೆ ಸುಧಾ ಕರೆ ಮಾಡುತ್ತಲೇ ಇದ್ದಳು. ಆದರೆ ಯಾವಾಗ ಉಮೇಶ್ ಬರಲಿಲ್ಲವೋ ಆಗ ಸುಧಾ ಪೊಲೀಸರಿಗೆ ಕರೆ ಮಾಡಿ ನನ್ನ ಗಂಡನನ್ನು ಎರಡನೇ ಪತ್ನಿ ಮನೆಯಿಂದ ನನ್ನ ಮನೆಗೆ ಕರೆದುಕೊಂಡು ಬನ್ನಿ ನನಗೆ ಸಹಾಯ ಮಾಡಿ ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾಳೆ.