ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದುಕೊಂಡಿದ್ದು, ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈವರೆಗೂ 6 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನ ಹಂಪಿನಗರ ನಿವಾಸಿ 47 ವರ್ಷದ ಮಹಿಳೆ (ರೋಗಿ-465) ಮೃತ ದುರ್ದೈವಿ. ಶೀತ, ನೆಗಡಿ, ಕೆಮ್ಮು ಮತ್ತು ನ್ಯೂಮೊನಿಯಾ ಲಕ್ಷಣದಿಂದ ಬಳಲುತ್ತಿದ್ದ ಮಹಿಳೆಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಮಹಿಳೆಯ ರಿಪೋರ್ಟ್ ನಲ್ಲಿ ಕೊರೊನಾಪಾಸಿಟಿವ್ ಬಂದಿತ್ತು. ಹೀಗಾಗಿ ಆಕೆಯ ಸಂಪರ್ಕದಲ್ಲಿದ್ದ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಮಹಿಳೆಯ ಸಂಪರ್ಕದಲ್ಲಿದ್ದ ಆಕೆಯ ಅಕ್ಕ, ಮಗ ಮತ್ತು ಅಳಿಯನಿಗೆ (ರೋಗಿ-498, 499 ಹಾಗೂ 500) ಸೋಂಕು ತಗುಲಿದೆ. ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಮೃತ ಮಹಿಳೆಯು ಹಂಪಿನಗರ, ದೀಪಾಂಜಲಿ ನಗರ ಮತ್ತು ಮೂಡಲ ಪಾಳ್ಯದಲ್ಲಿ ಓಡಾಡಿದ್ದಳು. ಹೀಗಾಗಿ ಈ ಮೂರೂ ಪ್ರದೇಶಗಳಲ್ಲಿ ಹೆಮ್ಮಾರಿ ಕಂಟಕ ಉಂಟು ಮಾಡುವ ಲಕ್ಷಣಗಳು ಕಂಡುಬರುತ್ತಿವೆ.
https://twitter.com/sriramulubjp/status/1254377747280883713
ಮೃತ ಮಹಿಳೆ (ರೋಗಿ-465) ಪ್ರಯಾಣದ ಹಿನ್ನಲೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ. ನೆಗಡಿ, ಕೆಮ್ಮು, ಶೀತ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಪತಿ ಏಪ್ರಿಲ್-2 ರಂದು ಮೃತಪಟ್ಟಿದ್ದ. ಹೀಗಾಗಿ ಕುಟುಂಬವು ಟಿ.ಆರ್ ಮಿಲ್‍ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿತ್ತು. 10 ದಿನದ ಬಳಿಕ ಮಹಿಳೆಗೂ ನೆಗಡಿ, ಕೆಮ್ಮು, ಶೀತ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು. ಅಷ್ಟೇ ಅಲ್ಲದೆ ಮಹಿಳೆಯು ಹಂಪಿನಗರದಿಂದ ದೀಪಾಂಜಲಿ ನಗರದ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದಳು. ಹಾಗಾಗಿ ಮಹಿಳೆಯ ಅಣ್ಣನ ಕುಟುಂಬದವರಿಗೂ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ.