ಮಿಂಚಿನ ನೋಂದಣಿ ಅಭಿಯಾನ ಜ.10ರವರೆಗೆ ವಿಸ್ತರಣೆ

Public TV
1 Min Read
624592 election commission 768x432 1

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ 18 ವರ್ಷ ತುಂಬಿದ ಎಲ್ಲ ಯುವ ಸಮುದಾಯದವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಜ.8 ಗಡುವು ನೀಡಲಾಗಿತ್ತು. ಇದೀಗ ‘ಮಿಂಚಿನ ನೋಂದಣಿ ಅಭಿಯಾನ’ವನ್ನು ಜ.10 ರವರೆಗೆ ವಿಸ್ತರಿಸಲಾಗಿದೆ.

ಜ.6 ರಿಂದ 8ರ ವರೆಗೆ ಮೂರು ದಿನಗಳ ಕಾಲ ಅಭಿಯಾನ ಕೈಗೊಳ್ಳಲಾಗಿತ್ತು. ಆದರೆ ಈಗ ಅಭಿಯಾನವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನೂ 2 ದಿನ ಅಂದರೆ ಜ.10ರ ವರೆಗೆ ವಿಸ್ತರಿಸಿದ್ದು, ಯುವಕ- ಯುವತಿಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ.

Voter ID

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 2020 ಜ.1ರಂದು 18 ವರ್ಷ ತುಂಬಿದವರು, ಹೊಸದಾಗಿ ಮತದಾನದ ಹಕ್ಕನ್ನು ಪಡೆಯಲು ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕರಪತ್ರಗಳನ್ನು ಹಂಚುವುದು, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಬ್ಯಾನರ್ ಅಂಟಿಸುವ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಮತದಾರ ಪಟ್ಟಿಗೆ ಸೇರ್ಪಡೆಯಾಗಲು ಪಾಲಿಕೆ ವಾರ್ಡ್, ಬೆಂಗಳೂರು 1 ಕೇಂದ್ರಗಳಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ. 18 ವರ್ಷ ತುಂಬಿದ ಯುವ ಮತದಾರರು ನಿಮ್ಮ ವಾರ್ಡ್ ವ್ಯಾಪ್ತಿಯ ಮತಗಟ್ಟೆ, ವಾರ್ಡ್ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗಳಿಗೆ ತೆರಳಿ ಹುಟ್ಟಿದ ದಿನಾಂಕ, ವಯಸ್ಸಿನ ದೃಢೀಕರಣ, ವಿಳಾಸದ ದೃಢೀಕರಣ ಹಾಗೂ ಪಾಸ್ ಪೋರ್ಟ್ ಅಳತೆಯ ಫೋಟೋಗಳು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಇಲ್ಲವೆ Voter Helpline App ಅಥವಾ www.nvsp.in ವೆಬ್‍ಸೈಟ್‍ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಲ್ಲದೆ www.ceokarnataka.kar.nic.in ವೆಬ್ ಸೈಟ್ ಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿಯ ಮಾಹಿತಿ ಖಚಿತಪಡಿಸಿಕೊಳ್ಳಬಹುದು.

Vote Finger

ಈಗಾಗಲೇ ಸಲ್ಲಿಸಿರುವ ಅರ್ಜಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು (ತಿದ್ದುಪಡಿ, ತೆಗೆದು ಹಾಕುವಿಕೆ ಮತ್ತು ಸೇರ್ಪಡೆ)ಜ.15ರ ವರೆಗೆ ಕಾಲಾವಕಾಶ ನೀಡಲಾಗಿದೆ. ಮಿಂಚಿನ ನೋಂದಣಿಯಲ್ಲಿ ಜ.6ರಂದು ಒಟ್ಟು 2,218 ಅರ್ಜಿಗಳು ಸಲ್ಲಿಕೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *