ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಎಲ್ಲರಿಗೂ ಇಂದು ಅಚ್ಚರಿ ಕಾದಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಭಿನ್ನ ಲುಕ್ ನಲ್ಲಿ ಕಲಾಪಕ್ಕೆ ಬಂದಿದ್ರು. ಎಲ್ಲೆಡೆ ಕೊರೊನಾ ಹಬ್ಬಿರುವ ಭೀತಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಬಿಟ್ಟಿಲ್ಲ ಅನ್ಸತ್ತೆ. ಅದಕ್ಕಾಗಿಯೇ ಇಂದಿನಿಂದ ಸಿದ್ದರಾಮಯ್ಯ ಅವರು ಕಲಾಪಕ್ಕೆ ಮಾಸ್ಕ್ ಧರಿಸಿ ಬರಲಾರಂಭಿಸಿದ್ದಾರೆ.
ಇದೇ ಮೊದಲ ಬಾರಿಗೆ ಮಾಸ್ಕ್ ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರಿಂದಲೋ ಏನೋ ಮಾಸ್ಕ್ ಧಾರಿ ಸಿದ್ದರಾಮಯ್ಯರನ್ನು ಕಂಡವರೆಲ್ಲ ಹುಬ್ಬು ಮೇಲಕ್ಕೆತ್ತಿ ಮುಗುಳ್ನಕ್ಕು ಅಚ್ಚರಿ ವ್ಯಕ್ತಪಡಿಸುತ್ತಿದ್ರು. ವಿಧಾನಸೌಧಕ್ಕೆ ಮಾಸ್ಕ್ ಹಾಕಿಕೊಂಡೇ ಆಗಮಿಸಿದ ಸಿದ್ದರಾಮಯ್ಯಗೆ ಪ್ರವೇಶ ದ್ವಾರದಲ್ಲಿ ಎದುರಾದ ಮೊದಲ ವ್ಯಕ್ತಿ ಅವರ ಮಾಜಿ ಮತ್ತು ಹಾಲಿ ಶಿಷ್ಯ ಸಚಿವ ರಮೇಶ್ ಜಾರಕಿಹೊಳಿ. ಈ ವೇಳೆ ಮಾಸ್ಕ್ ಧರಿಸಿದ ಸಿದ್ದರಾಮಯ್ಯ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಸ್ವಾರಸ್ಯಕರ ಸಂಭಾಷಣೆ ಸಹ ನಡೆಯಿತು.
ಮಾಸ್ಕ್ ಧರಿಸಿ ಬಂದ ಸಿದ್ದರಾಮಯ್ಯಗೆ, “ಏನ್ ಸರ್ ಮಾಸ್ಕ್ ಹಾಕ್ಕೊಂಡು ಬಂದಿದ್ದೀರ” ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿಯಿಂದ ಕೇಳಿದ್ರು. ಇದಕ್ಕೆ ಸಿದ್ದರಾಮಯ್ಯನವರು, “ವಯಸ್ಸಾಯ್ತಲ್ಲಯ್ಯ, ನನ್ನಿಂದ ಯಾರಿಗೂ ತೊಂದ್ರೆ ಆಗಬಾರದು, ಅದಕ್ಕೆ ಹಾಕಿದ್ದೀನಿ ಕಣಯ್ಯ. ನಿಂಗೆಷ್ಟು ವಯಸ್ಸು? ಅರವತ್ತಾಯ್ತಾ ನಿಂಗೆ?” ಅಂತ ತಮಾಷೆಯಾಗಿ ರಮೇಶ್ ಜಾರಕಿಹೊಳಿಗೆ ಕೇಳಿದ್ರು. ಆಗ ರಮೇಶ್ ಜಾರಕಿಹೊಳಿಯವರು, “ನಿಮಗೆ ಕೊರೊನಾ ಬರಲ್ಲ ಬಿಡಿ ಸರ್” ಎಂದು ಹೇಳಿ ಧೈರ್ಯ ಹೇಳುತ್ತಲೇ ವಿಧಾನಸಭೆ ಒಳಗೆ ಒಟ್ಟಿಗೆ ಹೆಜ್ಜೆ ಹಾಕಿದ್ರು.