ಬೆಂಗಳೂರು: ಗೋವಾದಲ್ಲಿ ಇರುವ ಕನ್ನಡಿಗರ ಸಮಸ್ಯೆ ವಿಧಾನ ಪರಿಷತ್ ನಲ್ಲಿಂದು ಪ್ರತಿ ಧ್ವನಿಸಿತು. ಗೋವಾ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಮುಖ್ಯಮಂತ್ರಿಗಳು ಉತ್ತರ ನೀಡುವಂತೆ ವಿಪಕ್ಷಗಳು ಒತ್ತಾಯ ಮಾಡಿದರು. ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಸೃಷ್ಟಿಯಾಗಿದ್ದರಿಂದ ಕಲಾಪವನ್ನು ಮುಂದೂಡಿದ ಘಟನೆ ಕೂಡ ನಡೀತು.
ವಿಧಾನ ಪರಿಷತ್ ಶೂನ್ಯವೇಳೆ ಕಲಾಪದಲ್ಲಿ ಗೋವಾದಲ್ಲಿ ಪೊಗೊ ಕಾಯಿದೆಯಿಂದ ಸಾವಿರಾರು ಕನ್ನಡಿಗರು ಆತಂಕದಲ್ಲಿ ಇದ್ದಾರೆ ಎಂದು ಬಸವರಾಜ ಹೊರಟ್ಟಿ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಸಿ.ಟಿ ರವಿ, ಯಾರು ಕೂಡ ಆತಂಕಪಡುವ ಅಗತ್ಯ ಇಲ್ಲ. ರಾಷ್ಟ್ರೀಯ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಬದ್ಧವಾಗಿದೆ. ಗೋವಾದಲ್ಲಿ ನಮ್ಮದೇ ಸರ್ಕಾರ ಇದೆ. ಆದರೆ ಈ ಅಭಿಯಾನ ಸರ್ಕಾರ ಬೆಂಬಲ ಕೊಟ್ಟಿಲ್ಲ. ನಮ್ಮ ಪಕ್ಷದವರಲ್ಲದ ಕೆಲವರು ಮತ ವಿಭಜನೆ ಹಾಗೂ ರಾಜಕೀಯಕ್ಕೆ ಮಾತ್ರ ಪೊಗೊ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಗೋವಾ ಸಿಎಂ ಪ್ರಮೋದ್ ಸಾವಂತ್ ಜೊತೆ ಈ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಕನ್ನಡಿಗರ ಹಿತ ಕಾಪಾಡಲು ಸರ್ಕಾರ ಬದ್ಧ ಅಂತ ತಿಳಿಸಿದರು.
ಸಚಿವರ ಉತ್ತರಕ್ಕೆ ಅಸಮಾಧಾನಗೊಂಡ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಗಂಭೀರ ವಿಚಾರವನ್ನು ಸರ್ಕಾರ ತೀರ ಹಗುರವಾಗಿ ತೆಗೆದುಕೊಂಡಂತೆ ಇದೆ ಎಂದು ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಕಿಡಿಕಾರಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವರ ಉತ್ತರದಿಂದ ತೃಪ್ತರಾಗದೆ ಬಾವಿಗೆ ಇಳಿದ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಧರಣಿ ನಡೆಸಿದರು. ಗೋವಾ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಘೋಷಣೆ ಕೂಗಿ ಸಿಎಂ ಉತ್ತರ ನೀಡಲು ಬಿಗಿಪಟ್ಟು ಹಿಡಿದರು. ಈ ವೇಳೆ ಆಡಳಿತ ಪಕ್ಷ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ತೀವ್ರ ಗದ್ದಲದ ಪರಿಸ್ಥಿತಿ ನಿರ್ಮಾಣವಾಯಿತು. ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು ಸಭಾಪತಿಗಳು ಮುಂದೂಡಿದರು.
20 ನಿಮಿಷದ ಬಳಿಕ ಪರಿಷತ್ ಕಲಾಪ ಮತ್ತೆ ಶುರುವಾಯಿತು. ಸಚಿವ ಸಿಟಿ ರವಿ ಮಾತನಾಡಿ, ಸರ್ಕಾರ ಮತ್ತು ವಿಪಕ್ಷ ಸದಸ್ಯರ ಅಭಿಪ್ರಾಯ ಒಂದೇ ಆಗಿದೆ. ಗೋವಾದಲ್ಲಿ ಕನ್ನಡಿಗರಿಗೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳಲು ಬದ್ಧ. ಧರಣಿ ವಾಪಸ್ ಪಡೆಯುವಂತೆ ಸಚಿವ ಸಿ.ಟಿ ರವಿ ಮನವಿ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮಾತನಾಡಿ, ಗೋವಾದಲ್ಲಿ 4 ಲಕ್ಷ ಕನ್ನಡಿಗರ ಬದುಕು ಅತಂತ್ರವಾಗಿದೆ. ಜೆಸಿಬಿ ತಂದು ಅವರ ಶೆಡ್ ಗಳನ್ನು ಒಡೆದು ಹಾಕಿದ್ದಾರೆ. ಕನ್ನಡಿಗರ ಮೇಲೆ ಹಲ್ಲೆ ಆಗಿದೆ. ಪೊಲೀಸರು ಈ ಬಗ್ಗೆ ದೂರು ದಾಖಲು ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಒಬ್ಬ ಸಚಿವರ ನೇತೃತ್ವದಲ್ಲಿ ಗೋವಾ ಸಿಎಂ ಬಳಿ ನಿಯೋಗ ಹೋಗಬೇಕು ಎಂದು ಎಸ್.ಆರ್ ಪಾಟೀಲ್ ಒತ್ತಾಯ ಮಾಡಿದರು.
ವಿಪಕ್ಷ ನಾಯಕರ ಸಲಹೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ.ರವಿ, ಈ ವಿಷಯವನ್ನು ಸಿಎಂಗೆ ಮನವರಿಕೆ ಮಾಡುತ್ತೇವೆ. ಮುಖ್ಯಮಂತ್ರಿ ಗಳೇ ಈ ಬಗ್ಗೆ ಪರಿಷತ್ ನಲ್ಲಿ ಸೋಮವಾರ ಹೇಳಿಕೆ ನೀಡ್ತಾರೆ ಎಂದ ತಿಳಿಸಿದರು. ಬಳಿಕ ವಿಪಕ್ಷಗಳು ಧರಣಿ ವಾಪಸ್ ಪಡೆದರು.