ಅಸ್ಪೃಶ್ಯತೆ, ಮತಾಂತರದ ಕುರಿತು ಪರಿಷತ್‍ನಲ್ಲಿ ಚರ್ಚೆ

Public TV
2 Min Read
Vidhana Parishad 4

ಬೆಂಗಳೂರು: ಅಸ್ಪೃಶ್ಯರ ಸ್ಥಿತಿಗತಿ, ಮತಾಂತರಕ್ಕೆ ಕಾರಣಗಳೇನು. ಸಂವಿಧಾನ ಬದ್ಧ ಹಕ್ಕುಗಳು ಅವಕಾಶಗಳಿಂದ ಅಸ್ಪೃಶ್ಯರು ವಂಚಿತವಾಗುತ್ತಿರುವ ಕುರಿತು ಬೆಳಕು ಚೆಲ್ಲುವ ಅರ್ಥಪೂರ್ಣ ಚರ್ಚೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂವಿಧಾನದ ಮೇಲಿನ ಚರ್ಚೆಗೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವಕಾಶ ನೀಡಿದರು. ಕಾಂಗ್ರೆಸ್ ಸದಸ್ಯ ಧರ್ಮಸೇನಾ ಮಾತನಾಡಿ, ಇಂದು ಕೂಡ ಮತಾಂತರ ಆಗುತ್ತಿದೆ. ಯಾಕೆ ಆಗುತ್ತಿದೆ ಎನ್ನುವ ಹಿನ್ನಲೆ ಹುಡುಕಬೇಕಿದೆ ಎಂದರು.

1976-77ರಲ್ಲಿ ತಮಿಳುನಾಡಿನ ವೈದ್ಯನಾಥೇಶ್ವರ ಕೋಯಲ್‍ನಲ್ಲಿ ದಲಿತರು ಸಾಮೂಹಿಕ ಮತಾಂತರಕ್ಕೆ ಮುಂದಾಗಿದ್ದರು. ಆಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಮತಾಂತರ ಬೇಡ ಎಂದು ಕಠಿಣ ಸಂದೇಶ ನೀಡುತ್ತಾರೆ. ಆದರೂ ಅಲ್ಲಿನ ದಲಿತರು ನಾವು ಇಲ್ಲಿ ಉಳಿಯಲ್ಲ. ಬೌದ್ಧ ಧರ್ಮ ಸ್ವೀಕಾರ ಮಾಡುತ್ತೇವೆ ಎಂದಾಗ ವೈದ್ಯನಾಥೇಶ್ವರ ಕೋಯಲ್‍ಗೆ ಬಾಬು ಜಗಜೀವನ್ ರಾಮ್‍ರನ್ನು ಕಳಿಸಿಕೊಟ್ಟರು. ಅವರು ತಿಳಿಹೇಳಿ ಮತಾಂತರ ತಪ್ಪಿಸಿದರು. ಈಗಲೂ ನನ್ನ ಕ್ಷೇತ್ರವಾದ ಟಿ.ನರಸೀಪುರಲ್ಲಿ ಬಹಳ ಜನ ಮತಾಂತರ ಆಗುತ್ತಿದ್ದಾರೆ. ಅಲ್ಲಿ ಯಾರೂ ಕ್ರಿಶ್ಚಿಯನ್ ಇಲ್ಲ. ಕ್ರಿಶ್ಚಿಯನ್‍ಗೆ ಮತಾಂತರದವರೇ ಇದ್ದಾರೆ. ಅಸ್ಪೃಶ್ಯರಿಗೆ ರಕ್ಷಣೆ ಇಲ್ಲದ ಕಾರಣಕ್ಕೆ ಹೀಗಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

nagaraja

ಅಸ್ಪೃಶ್ಯತೆ ನಿವಾರಣೆಗೆ ಕಾಂಗ್ರೆಸ್ ಏನು ಮಾಡಿತು ಎನ್ನುತ್ತಾರೆ. ಅಂದು ಹೋಟೆಲ್ ನಲ್ಲಿ ಅವರ ಲೋಟ ಅವರೇ ತೊಳೆಯಬೇಕಿತ್ತು. ದೇವಾಲಯಕ್ಕೆ ಪ್ರವೇಶ ಇರಲಿಲ್ಲ. ಇದೆಲ್ಲ ಕಾಂಗ್ರೆಸ್ ತೊಡೆದು ಹಾಕಿದೆ ಎಂದರು. ಅಸ್ಪೃಶ್ಯತೆ ನಡೆದಾಗ ಆ ಜವಾಬ್ದಾರಿ ಶಾಸಕರೇಕೆ ತೆಗೆದುಕೊಳ್ಳಲ್ಲ. ಕ್ಷೇತ್ರ ನನ್ನದು ಎನ್ನುವ ಶಾಸಕ, ಡಿಸಿ, ಎಸಿ, ತಹಶೀಲ್ದಾರ್, ಗ್ರಾಮ ಪಂಚಾಯತಿ ಅಧ್ಯಕ್ಷರು ಜವಾಬ್ದಾರಿ ತೆಗೆದುಕೊಳ್ಳಬೇಕು. ಧರ್ಮ ಹಾಗೂ ಸಂವಿಧಾನದಿಂದ ಅಸ್ಪೃಶ್ಯರಿಗೆ ರಕ್ಷಣೆ ಬೇಕಿದೆ. ಸಂವಿಧಾನ ತಿದ್ದುಪಡಿ ಸಾಕಷ್ಟು ಬಾರಿ ಆಗಿದೆ ಅದಕ್ಕೆ ನನ್ನದು ವಿರೋಧ ಇಲ್ಲ. ಆದರೆ ಅಸ್ಪೃಶ್ಯರಿಗೆ ಅನುಕೂಲ ಮಾಡಿಕೊಡಬೇಕು. ಕಾನೂನು ತಿದ್ದುಪಡಿ, ಸಂವಿಧಾನದ ಮೂಲಕವೇ ಒಳಮೀಸಲಾತಿ ತರಬೇಕಿದೆ ಎಂದು ಸದಾಶಿವ ಆಯೋಗ, ಒಳಮೀಸಲಾತಿ ಹೋರಾಟದ ಪ್ರಸ್ತಾಪ ಮಾಡಿದರು.

ಇಂದು ಕೂಡ ದೇಶದ ಸಂವಿಧಾನ ಮತ್ತು ಧರ್ಮದದಿಂದ ಅಸ್ಪೃಶ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ, ಮೀಸಲಾತಿ ತೆಗೆಯುವ ಚಿಂತನೆ ಬರುತ್ತಿದೆ. ಕೆಲವರು ಈ ಕುರಿತು ಮಾತನಾಡುತ್ತಿದ್ದಾರೆ. ಒಂದು ವೇಳೆ ಮೀಸಲಾತಿ ರದ್ದುಪಡಿಸಿದರೆ ಅಂದೇ ಪ್ರಜಾಪ್ರಭುತ್ವ ಹೊರಟು ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

jayamala

ಇದಕ್ಕೆ ಪೂರಕವಾಗಿ ಮಾತನಾಡಿದ ತೇಜಸ್ವಿನಿ ರಮೇಶ್ ಮತಾಂತರಕ್ಕೆ ಕೇವಲ ಅಸ್ಪೃಶ್ಯತೆ ಕಾರಣವಲ್ಲ. ಬಡತನ ಹಾಗೂ ಮುಗ್ಧತೆಯ ಕಾರಣಕ್ಕೆ ಮತಾಂತರ ನಡೆಯುತ್ತಿದೆ ಎಂದರು. ಈ ವೇಳೆ ಆರ್.ಬಿ ತಿಮ್ಮಾಪೂರ್, ಮೇಲ್ವರ್ಗದ ರಾಜಕಾರಣಿಗಳು ಇಂದು ಕೂಡ ಜೇಬಿನಲ್ಲಿ ಲೋಟ ಕೊಂಡೊಯ್ದು ಹೋಗಿ ಅಸ್ಪೃಶ್ಯರ ಮನೆಗಳಲ್ಲಿ ಟೀ ಹಾಕಿಸಿಕೊಂಡು ಕುಡಿಯುತ್ತಾರೆ ಅಂತಹ ಪದ್ಧತಿ ಇನ್ನು ಇದೆ ಎಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ನಾವು ಯಾವ ಕಾಲದಲ್ಲಿ ಇದ್ದೇವೆ. ನಾಚಿಕೆಯಾಗಬೇಕು. ತಮ್ಮ ಲೋಟ ತೆಗೆದುಕೊಂಡು ಹೋಗಿ ಅಸ್ಪೃಶ್ಯರ ಮನೆಯಲ್ಲಿ ಟೀ ಹಾಕಿಸಿಕೊಳ್ಳುತ್ತಾರೆ ಎಂದರೆ ಖಂಡಿಸಬೇಕು. ಇವರಿಗೆ ಮನುಷ್ಯತ್ವ ಇದೆ ಅನ್ನಬೇಕಾ? ಶಾಸಕ, ಸಂಸದ, ಮಂತ್ರಿ ಯಾರೇ ಆಗಲಿ ಇಂತಹ ಕೆಲಸ ಮಾಡಿದಲ್ಲಿ ಅದು ಖಂಡನೀಯ ಎಂದರು. ಪಕ್ಷಾತೀತವಾಗಿ ಇದರ ವಿರುದ್ಧ ಧ್ವನಿ ಕೇಳಿ ಬಂತು.

Vidhana Parishad

Share This Article
Leave a Comment

Leave a Reply

Your email address will not be published. Required fields are marked *