ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿಂದು ಇವಿಎಂ ವಿಚಾರವಾಗಿ ದೊಡ್ಡ ಗಲಾಟೆ ಆಯ್ತು. ಇವಿಎಂನಲ್ಲಿ ಅಕ್ರಮ ನಡೆಯುತ್ತೆ. ಇವಿಎಂ ವ್ಯವಸ್ಥೆಯನ್ನೆ ರದ್ದು ಮಾಡಿ ಎಂದು ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ ಮಾತು ಕಲಾಪದಲ್ಲಿ ಗದ್ದಲಕ್ಕೆ ಕಾರಣವಾಯ್ತು. ಇಬ್ರಾಹಿಂ ವಿರುದ್ಧ ಮುಗಿಬಿದ್ದ ಬಿಜೆಪಿ ಸದಸ್ಯರು ಇವಿಎಂನ್ನು ಸಮರ್ಥನೆ ಮಾಡಿಕೊಂಡರು.
ವಿಧಾನ ಪರಿಷತ್ ನಲ್ಲಿ ಸಂವಿಧಾನ ಮೇಲೆ ಚರ್ಚೆ ಮಾಡುವಾಗ ಮಾತನಾಡಿದ ಸದಸ್ಯ ಸಿಎಂ ಇಬ್ರಾಹಿಂ, ಚುನಾವಣೆ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸಿದರು. ಚುನಾವಣೆ ಆಯೋಗ ಇವತ್ತು ಸಂಪೂರ್ಣವಾಗಿ ಬಲಹೀನವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಇವಿಎಂನಲ್ಲಿ ಗೋಲ್‍ಮಾಲ್ ನಡೆಯುತ್ತಿದೆ ಎಂದು ಆರೋಪ ಮಾಡಿದರು. ವಿಶ್ವದ ಬಹುತೇಕ ಮುಂದುವರೆದ ದೇಶಗಳು ಇವಿಎಂನ್ನು ವಿರೋಧ ಮಾಡಿದ್ದಾರೆ. ಮುಂದುವರೆದ ದೇಶಗಳು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸುತ್ತಿವೆ. ನಮ್ಮ ದೇಶದ ಇವಿಎಂ ವ್ಯವಸ್ಥೆ ಮೇಲೆ ನನಗೆ ಅನುಮಾನ ಇದೆ. ಹೀಗಾಗಿ ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹ ಮಾಡಿದರು.
Advertisement
Advertisement
ಸಿಎಂ ಇಬ್ರಾಹಿಂ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಇಬ್ರಾಹಿಂ ವಿರುದ್ಧ ಕಿಡಿಕಾರಿದರು. ಇವಿಎಂ ದೇಶಕ್ಕೆ ತಂದೋರು ಕಾಂಗ್ರೆಸ್ಸಿನವರು. ಈಗ ಅವರೇ ವಿರೋಧ ಮಾಡೋದು ದುರಂತ ಎಂದು ಆಕ್ರೋಶ ಹೊರ ಹಾಕಿದರು. ಕಾಂಗ್ರೆಸ್ ನವರು ಗೆದ್ದರೆ ಇವಿಎಂ ದೋಷ ಇರುವುದಿಲ್ಲ. ಆದರೆ ಬಿಜೆಪಿ ಗೆದ್ದಾಗ ಮಾತ್ರ ಇವಿಎಂ ದೋಷ ಅಂತೀರಾ ಎಂದು ಇಬ್ರಾಹಿಂ ವಿರುದ್ಧ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಈ ವೇಳೆ ಆಡಳಿತ ಪಕ್ಷ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ ಆಯ್ತು.
Advertisement
Advertisement
ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಸೀತೆ ಮೇಲೆ ಅನುಮಾನ ಬಂದಾಗ ರಾಮ ಸೀತೆಯನ್ನು ಕಾಡಿಗೆ ಕಳಿಸಿ ತ್ಯಾಗ ಮಾಡಿದ. ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಇವಿಎಂ ತ್ಯಾಗ ಮಾಡಲು ಆಗುವುದಿಲ್ಲವಾ ಎಂದು ಪ್ರಶ್ನೆ ಮಾಡಿದರು. ಇಬ್ರಾಹಿಂ ಮಾತಿಗೆ ಮತ್ತೆ ಸದನದಲ್ಲಿ ಗದ್ದಲ ಗಲಾಟೆ ನಡೆಯಿತು. ಬಳಿಕ ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.