ಚಿದಾನಂದ ಮೂರ್ತಿ ನಿಧನಕ್ಕೆ ನಂದೀಶ್ ಹಂಚೆ ಸಂತಾಪ

Public TV
1 Min Read
nandeesh

ಬೆಂಗಳೂರು: ಕನ್ನಡದ ಹಿರಿಯ ಲೇಖಕ, ಸಂಶೋಧಕ, ಚಿಂತಕ ಡಾ.ಎಂ ಚಿದಾನಂದ ಮೂರ್ತಿ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್ ನಂದೀಶ್ ಹಂಚೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಚಿದಾನಂದ ಮೂರ್ತಿ ಅವರು ಕನ್ನಡದ ಸಂಶೋಧನಾ ಕ್ಷೇತ್ರಕ್ಕೆ ಹೊಸ ಆಯಾಮ ಕೊಟ್ಟವರು. ತಮ್ಮ ಅಸಾಧಾರಣ ಪ್ರತಿಭೆಯಿಂದ ಕನ್ನಡ ಸಾಹಿತ್ಯದ ಔನ್ನತ್ಯಕ್ಕೆ ಏರಿದವರು. ಅವರ ಶೂನ್ಯ ಸಂಪಾದನೆಯನ್ನು ಕುರಿತು ಕೃತಿ ಇಂದಿಗೂ ವಿದ್ಯಾರ್ಥಿಗಳ ಕೈಪಿಡಿ ಎಂದು ಪರಿಗಣಿಸಲ್ಪಟ್ಟಿದೆ ಎಂದಿದ್ದಾರೆ.

chidabmar 5

ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಂಶೋಧನಾ ಗ್ರಂಥವೊಂದು ಹೇಗಿರಬೇಕು ಎಂಬುದಕ್ಕೆ ಮಾದರಿ ಆಗಿದೆ. ನಲವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು, ನೂರಾರು ಸಂಶೋಧನಾ ಲೇಖನಗಳನ್ನು ನೀಡಿರುವ ಚಿದಾನಂದಮೂರ್ತಿ ಅಪರಿಮಿತವಾದ ಶಿಷ್ಯ ಸಂಪತ್ತನ್ನು ಹೊಂದಿದ್ದಾರೆ. ಬಹಳ ಮುಖ್ಯವಾಗಿ ಕನ್ನಡ ಶಕ್ತಿ ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಕನ್ನಡಕ್ಕೆ ಕುತ್ತು ಬಂದ ಸಂದರ್ಭಗಳಲ್ಲಿ ಅವರು ನಡೆಸಿದ ಹೋರಾಟ ಅವಿಸ್ಮರಣೀಯ ಗೋಕಾಕ್ ಚಳವಳಿಯಲ್ಲಿ ಅವರು ನೀಡಿದ ಕಾಣಿಕೆ ಬಹಳ ದೊಡ್ಡದು ಎಂದು ನೆನಪು ಮಾಡಿಕೊಂಡಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ 2018ನೇ ಸಾಲಿನ ಡಾ ಎಂಎಂ ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿತ್ತು.ಫೆಬ್ರವರಿ 11 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಅವರು ವಿಧಿವಶರಾಗಿದ್ದು ನಮ್ಮ ದುರ್ದೈವವಾಗಿದೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಒಂದು ತಲೆಮಾರಿನ ಕೊಂಡಿಯನ್ನು ಕಳಚಿಕೊಂಡಿದೆ ಎಂದು ಡಾ. ಎಂ ಎನ್ ನಂದೀಶ್ ಹಂಚೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

murthy

Share This Article
Leave a Comment

Leave a Reply

Your email address will not be published. Required fields are marked *