ವೇಷಧಾರಿಯದ್ದು ಮುಖವಾಡ ಕಳಚೋ ಆಂತರ್ಯ?

Public TV
1 Min Read
VESHADHARI

ಬೆಂಗಳೂರು: ಬಿಗ್ ಬಜೆಟ್ಟಿನ ಮೂಲಕವೇ ಸದ್ದು ಮಾಡುತ್ತಾ ಸಾಗುವ ಸ್ಟಾರ್ ಸಿನಿಮಾಗಳ ಅಬ್ಬರದ ಮಗ್ಗುಲಲ್ಲಿಯೇ ಸೀಮಿತ ಬಜೆಟ್ಟಿನಲ್ಲಿ ವಿಶಿಷ್ಟವಾದ ಕಥೆಗಳನ್ನು ದೃಷ್ಯೀಕರಿಸುವಂತಹ ಪ್ರಯತ್ನಗಳೂ ಯಥೇಚ್ಛವಾಗಿಯೇ ನಡೆಯುತ್ತಿವೆ. ಸಣ್ಣ ಬಜೆಟ್ಟಿನಲ್ಲಿ ದೊಡ್ಡ ಮಟ್ಟದ ಪರಿಶ್ರಮ ವಹಿಸಿ ಅತ್ಯಂತ ಕ್ರಿಯಾಶೀಲವಾಗಿ ಸಿನಿಮಾ ರೂಪಿಸುತ್ತಲೇ ಗೆಲ್ಲುವ ಕಸುವು ಹೊಂದಿರೋ ಸಿನಿಮಾಗಳ ಒಳಹರಿವು ಕೂಡ ಕನ್ನಡ ಚಿತ್ರರಂಗದಲ್ಲೀಗ ತೀವ್ರಗೊಂಡಿದೆ. ಅದೇ ಸಾಲಿನಲ್ಲಿ ಸೇರ್ಪಡೆಗೊಳ್ಳುವಂತಹ ಗುಣಲಕ್ಷಣಗಳನ್ನು ಹೊಂದಿರುವ ವೇಷಧಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

VESHADHARI 2

ಈಗಾಗಲೇ ಒಂದಷ್ಟು ವರ್ಷಗಳ ಕಾಲ ವಾಹಿನಿಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಶಿವಾನಂದ್ ಭೂಶಿ ನಿರ್ದೇಶನದ ಚೊಚ್ಚಲ ಚಿತ್ರ ವೇಷಧಾರಿ. ಇವನು ಅವನಲ್ಲ ಎಂಬ ಅಡಿಬರಹ ಮತ್ತು ಈಗಾಗಲೇ ಜಾಹೀರಾಗಿರೋ ಟ್ರೇಲರ್ ಮತ್ತು ಪೋಸ್ಟರ್‍ಗಳ ಮೂಲಕ ಈ ಸಿನಿಮಾ ಹಂತ ಹಂತವಾಗಿ ಸದ್ದು ಮಾಡಿಕೊಂಡು ಬಂದಿದೆ. ಟ್ರೇಲರ್‍ನಲ್ಲಿ ಮಜವಾದ ಕಾಮಿಡಿ ಬೆರೆತ ಕಥಾ ಹಂದರದ ರೂಪುರೇಷೆಗಳು ಕೂಡ ಅನಾವರಣಗೊಂಡಿವೆ. ಪ್ರಾಮಿಸಿಂಗ್ ಆಗಿರೋ ಈ ಟ್ರೇಲರ್‍ನಲ್ಲಿ ತೆಳು ಹಾಸ್ಯದ ಕಥಾನಕದಂತೆಯೇ ಗಹನವಾದ ಕಥೆಯೂ ಈ ಸಿನಿಮಾದಲ್ಲಿದೆಯೆಂಬಂತಹ ವಿಚಾರ ಕೂಡ ಪ್ರೇಕ್ಷಕರನ್ನು ತಲುಪಿಕೊಂಡಿದೆ.

VESHADHARI 3

ನಮ್ಮ ನಡುವೆ ಆಧ್ಯಾತ್ಮಿಕ ಪಾವಿತ್ರ್ಯವನ್ನು ಪರಿಪಾಲಿಸುವ ಒಂದಷ್ಟು ಕಾವಿ ತೊಟ್ಟ ಮಂದಿ ಇರುವಂತೆಯೇ ಕಪಟವನ್ನೇ ಕಾವಿಯ ಸ್ವರೂಪದಲ್ಲಿ ಸುತ್ತಿಕೊಂಡ ಮಂದಿಯೂ ಯಥೇಚ್ಛವಾಗಿಯೇ ಸೃಷ್ಟಿಯಾಗಿದ್ದಾರೆ. ಸ್ವಾಮೀಜಿಗಳಾದವರು ನಿಜಕ್ಕೂ ಅರಿಷಡ್ವರ್ಗಗಳನ್ನು ಮೀರಿಕೊಂಡು ಬದುಕಲು ಸಾಧ್ಯವೇ ಎಂಬಂತಹ ಗಂಭೀಯ ಪ್ರಶ್ನೆಯ ತಳಹದಿಯಲ್ಲಿ ರೂಪುಗೊಂಡಿರುವ ಕಥೆ ಈ ಸಿನಿಮಾದಲ್ಲಿದೆಯಂತೆ. ಈ ಮೂಲಕ ಕಾವಿ ತೊಟ್ಟು ಜನಸಾಮಾನ್ಯರಿಗೆ ಮಂಕುಬೂದಿ ಎರಚೋ ಕೆಲ ಮಂದಿಯ ಮುಖವಾಡ ಕಳಚುವ ಕ್ರಾಂತಿಕಾರಕ ಅಂಶಗಳು ಕೂಡ ಈ ಸಿನಿಮಾದಲ್ಲಿದ್ದಂತಿದೆ. ವೇಷಧಾರಿಯ ಅಸಲೀ ಆಂತರ್ಯ ಇದೇ ವಾರ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *