ವಾಸುಕಿ ಕೊರೊನಾ ಹಾಡಿಗೆ ಚಂದನವನದ ತಾರೆಯರ ಸಮಾಗಮ

Public TV
2 Min Read
vasuki song

ಬೆಂಗಳೂರು: ಕೊರೊನಾ ಎಲ್ಲ ಕಡೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಕೊರೊನಾ ವಿರುದ್ಧ ಬಿಗ್ ಬಾಸ್ ಖ್ಯಾತಿಯ ಗಾಯಕ ವಾಸುಕಿ ವೈಭವ್ ಅವರು ಸುಂದರವಾದ ಹಾಡೊಂದನ್ನು ತಮ್ಮ ಅದ್ಭುತ ಕಂಠಸಿರಿಯಲ್ಲಿ ಹಾಡಿದ್ದು, ಇದಕ್ಕೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಸಾಥ್ ನೀಡಿದ್ದಾರೆ.

ಹೌದು. ಗಾಯಕ ವಾಸುಕಿ ವೈಭವ್ ಅವರು ಕೊರೊನಾ ಲಾಕ್‍ಡೌನ್ ನಡುವೆಯೂ ಕೂಡ ಕೊರೊನಾ ವಿರುದ್ಧ ನಗುತಲಿರು ಎಂಬ ಹೊಸ ಹಾಡನ್ನು ಹಾಡಿದ್ದಾರೆ. ಈ ಹಾಡಿಗೆ ಕನ್ನಡದ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅವರು ಸೇರಿದಂತೆ ಎಲ್ಲ ದಿಗ್ಗಜ ನಟ-ನಟಿಯರು ದನಿಯಾಗಿದ್ದಾರೆ. ಈ ಮೂಲಕ ಮನೆಯಲ್ಲೇ ನಗುತಲಿರೋಣ ಎಂಬ ಸಂದೇಶವನ್ನು ಜನರಿಗೆ ರವಾನಿಸಿದ್ದಾರೆ.

https://www.instagram.com/p/B_FRUg1JYRV/

ಕೊರೊನಾ ದೇಶದ ತುಂಬಾ ತಂಡವಾಡುತ್ತಿರುವ ಹೊತ್ತಿನಲ್ಲಿ ನಟ-ನಟಿಯರು ಸೇರಿ ಲಾಕ್‍ಡೌನ್‍ನಲ್ಲಿ ಬಂಧಿಯಾಗಿರುವ ಜನರ ಆತಂಕವನ್ನು ದೂರ ಮಾಡಿ ಹಾಡಿನ ಮೂಲಕ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. ಚಿಂತೆ ದೂರ ಮಾಡಿ, ಭರವಸೆ ಮೂಡಿಸುವ ಈ ಹಾಡನ್ನು ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿಗೆ ರಮೇಶ್ ಅರವಿಂದ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟ ನಟಿಯರು ಸಾಥ್ ಕೊಟ್ಟಿದ್ದಾರೆ.

corona song by vasuki

ದೇಶದಾದ್ಯಂತ ಎಲ್ಲೆಡೆ ಆತಂಕ ಸೃಷ್ಟಿಸಿರುವ ಕಿಲ್ಲರ್ ಕೊರೊನಾ ಭಯವನ್ನು ದೂರ ಮಾಡಲು ಹಾಡಿನ ಮೂಲಕ ಸ್ಟಾರ್ಸ್ ಒಂದಾಗಿದ್ದಾರೆ. ಪುನಿತ್ ರಾಜ್‍ಕುಮಾರ್ ನೀನೆ ತಾಯಿ ನೀನೇ ತಂದೇ ಭೂಮಿ-ತಾಯಿ ಎಲ್ಲಾ ನಿಂದೆ ಎಂದು ಡಾ.ರಾಜ್ ಹಾಗೂ ಪಾರ್ವತಮ್ಮ ಅವರ ಫೋಟೋ ಮುಂದೆ ನಿಂತು ಹಾಡಿನ ಆರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದ್ದು, ಪನ್ನಗಾಭರಣ ನಿರ್ದೇಶನ, ರಾಮರಾಮರೇ ಖ್ಯಾತಿಯ ಸತ್ಯ ಪ್ರಕಾಶ್ ಸಾಹಿತ್ಯ, ನಾಬಿನ್ ಪೌಲ್ ಸಂಗೀತ ಸಂಯೋಜನೆ, ರವಿ ಆರಾಧ್ಯ ಸಂಕಲನದ ಈ ಹಾಡಿನ ಸಾಲು ಮನಮುಟ್ಟುತ್ತಿದೆ.

vasuki corona song

ಇದರಲ್ಲಿ ನಟಿ ರಕ್ಷಿತಾ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಡಾಲಿ ಧನಂಜಯ್, ಶ್ರದ್ಧಾ, ಪ್ರಣೀತಾ, ಐಂದ್ರಿತಾ, ದಿಗಂತ್, ಪ್ರಜ್ವಲ್, ಚಿರಂಜೀವಿ ಸರ್ಜಾ, ಮೇಘನಾ, ಅನುಪಮಾ, ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಅನೇಕರು ಈ ಹಾಡಿಗೆ ಜೀವ ತುಂಬಿದ್ದಾರೆ. ಲಾಕ್‍ಡೌನ್‍ನಲ್ಲಿದ್ದರೂ ನಾವೆಲ್ಲರೂ ಎಂದೆಂದಿಗೂ ಒಂದೇ ಎನ್ನುತ್ತಾ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್ ಹಾಗೂ ಸೈನಿಕರಿಗೆ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ನಗುತಾ ಮನೆಯಲ್ಲೇ ಸುರಕ್ಷಿತರಾಗೋಣ ಎಂಬ ಸಂದೇಶ ಸಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *