ಬೆಂಗಳೂರು: ಇದು ಕೋಲಾರದ ಮಾಜಿ ಶಾಸಕ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಇಂಟರೆಸ್ಟಿಂಗ್ ಕಹಾನಿ. ಪಕ್ಷೇತರ ಶಾಸಕರಾಗಿ ಎರಡೆರಡು ಬಾರಿ ಗೆದ್ದಿದ್ದ ವರ್ತೂರ್ ಪ್ರಕಾಶ್, ಯಡಿಯೂರಪ್ಪ ಅವಧಿಯಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಂದು ಸಿಎಂ ಯಡಿಯೂರಪ್ಪಗೆ ಬೆಂಬಲ ಕೊಡುವಾಗ ನಾನು ಮೊದಲ 2 ವರ್ಷ ಮುಖ್ಯಮಂತ್ರಿಯಾಗುತ್ತೇನೆ. ನೀವು ಆನಂತರ 3 ವರ್ಷ ಸಿಎಂ ಆಗಿ ಎಂದು ಬಿಎಸ್‍ವೈ ಕೋಪಕ್ಕೆ ಕಾರಣವಾಗಿದ್ದರು.
ಈಗ ಮತ್ತೊಮ್ಮೆ ಅಂತದ್ದೇ ಪ್ರಯತ್ನ ಮಾಡಿ ಸಾಕಪ್ಪ ನಿನ್ನ ಸಹವಾಸ ಅಂತ ಮಾಜಿ ಸಿಎಂರಿಂದ ದೂರವಾಗಿದ್ದಾರೆ. ಶತಾಯಗತಾಯ ಕಾಂಗ್ರೆಸ್ ಸೇರ್ಪಡೆಗೆ ಯತ್ನಿಸುತ್ತಿರುವ ವರ್ತೂರ್ ಪ್ರಕಾಶ್, ಕಳೆದ 2 ತಿಂಗಳಿನಿಂದ ಪದೇ ಪದೇ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದಾರೆ. ನಿಮ್ಮನ್ನು ಮತ್ತೊಮ್ಮೆ ಸಿಎಂ ಮಾಡಬೇಕು ನಾನು ಕಾಂಗ್ರೆಸ್ಸಿಗೆ ಬರುತ್ತೇನೆ ಎಂದು ಸಿದ್ದರಾಮಯ್ಯರ ಬಳಿ ಪದೇ ಪದೇ ಬಂದು ಕಿರಿಕಿರಿ ಮಾಡಿದ್ದಾರೆ. ಒಂದು ಹಂತದಲ್ಲಿ ನಾನು ಕಾಂಗ್ರೆಸ್ಸಿಗೆ ಬಂದರೆ ಮುಂದಿನ ಚುನಾವಣೆಯಲ್ಲಿ 150 ಶಾಸಕರನ್ನ ಗೆಲ್ಲಿಸುತ್ತೇನೆ. ನೀವೇ ಸಿಎಂ ಆಗಿ ಎಂದು ಸಿದ್ದರಾಮಯ್ಯಗೆ ಹೊಸ ಆಫರ್ ಕೊಟ್ಟಿದ್ದಾರೆ. ನೀವು ಒಪ್ಪದಿದ್ದರೆ ನಾನು ಬಿಜೆಪಿ ಸೇರ್ಪಡೆಯಾಗಿ ಬೇರೆಯವರನ್ನ ಸಿಎಂ ಮಾಡುತ್ತೇನೆ ಎಂದು ಹೊಸ ವರಸೆ ತಗೆದಿದ್ದಾರೆ.
ವರ್ತೂರ್ ವರಸೆಯಿಂದ ಬೇಸತ್ತ ಸಿದ್ದರಾಮಯ್ಯ, 150 ಶಾಸಕರನ್ನ ನೀನೇ ಗೆಲ್ಲಿಸುವುದಾದರೆ ನಾನ್ಯಾಕೆ ಸಿಎಂ ಆಗಲಿ ನೀನೇ ಸಿಎಂ ಆಗು ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಸಿಗೆ ಬಂದು 150 ಶಾಸಕರನ್ನ ಗೆಲ್ಲಿಸೋದು ಬೇಡ ನೀನು ಬಿಜೆಪಿಗೆ ಹೋಗಿ ಆ ಕೆಲಸ ಮಾಡು ಎಂದು ಸಾಗ ಹಾಕಿದ್ದಾರೆ.
ತಮ್ಮ ಮಾಜಿ ಶಿಷ್ಯನ ವರಸೆ ಕಂಡು ಸ್ವತಃ ಸಿದ್ದರಾಮಯ್ಯ ಅವರು, ಬೇಡವೇ ಬೇಡ ನಿನ್ನ ಸಹವಾಸ ಎಂದು ಸಾಗ ಹಾಕಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲದೆ ಹೊರಟ ವರ್ತೂರ್ ಪ್ರಕಾಶ್, 150 ಶಾಸಕರನ್ನು ಗೆಲ್ಲಿಸಿ ಯಾರನ್ನ ಸಿಎಂ ಮಾಡೋದು ಎಂದು ಫುಲ್ ಟೆನ್ಷನ್ ನಲ್ಲಿ ಓಡಾಡುತ್ತಿದ್ದಾರಂತೆ.