ಬೆಂಗಳೂರು: ನಾನೂ ಕೂಡ ಹಿಂದೂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಿಂದೂ ವ್ಯಾಖ್ಯಾನ ನೀಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ನಗರದ ಗೋವಿಂದರಾಜನಗರ ಬಿಜಿಎಸ್ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಹಿಂದೂ ಎನ್ನುವವರು ಗೋಹತ್ಯೆ ನಿಷೇಧ ಮಾಡಲಿ, ಹಿಂದೂ ಪದ್ಧತಿಯಲ್ಲಿ ಗೋಮಾಂಸ ತಿನ್ನಲ್ಲ, ಹಿಂದೂ ವ್ಯಾಖ್ಯಾನ ಗೊತ್ತಾ ಅಂತಾ ಖಾರವಾಗಿ ಪ್ರಶ್ನಿಸಿದರು.
Advertisement
ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದ್ದು, ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಹಿಂದುತ್ವ ಭಾರತೀಯ ಪದ್ದತಿಯಾಗಿದ್ದು, ಅದು ಯಾವುದೇ ಜಾತಿ, ಧರ್ಮದ ವಿಚಾರ ಅಲ್ಲ. ಹಿಂದುತ್ವ ಭಾರತದ ಜೀವಾಳ. ಅತ್ಯಂತ ಉತ್ಕೃಷ್ಟ ಜೀವನ ಹಿಂದುತ್ವ. ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲು ಮುಂದಾಗಿತ್ತು. ಆದರೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಕಾಂಗ್ರೆಸ್ ಈ ದೇಶದ ಸಮಸ್ಯೆ ಆಗಿದೆ, ಭ್ರಷ್ಟಾಚಾರದ ಕಾರಣಕ್ಕಾಗಿ, ವಿನಾಶಕಾರಿ ನೀತಿಗಳ ಕಾರಣಕ್ಕಾಗಿ ಅದು ಸಮಸ್ಯೆಯಾಗಿದೆ. ರಾಜ್ಯದಲ್ಲೂ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.
Advertisement
ಕರ್ನಾಟಕದ ರೈತರಿಗಾಗಿ, ಬೆಂಗಳೂರಿನ ಅಭಿವೃದ್ಧಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಕೇಂದ್ರ ಬೆಂಗಳೂರಿನ ಅಭಿವೃದ್ಧಿಗೆ ಮೆಟ್ರೋ ಸೇರಿದಂತೆ ಅನೇಕ ಯೋಜನೆಗಳನ್ನು ಕೊಟ್ಟಿದೆ. ಆದರೆ ಯೋಜನೆ ಅನುಷ್ಟಾನ, ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಮೇಲೂ ಜವಾಬ್ದಾರಿ ಇದೆ. ಆದರೆ ಅಭಿವೃದ್ಧಿ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿಲ್ಲ ಟೀಕಿಸಿದರು.
ಕರ್ನಾಟಕ ಭಜರಂಗಬಲಿಯ ಜನ್ಮಸ್ಥಾನ. ಕರ್ನಾಟಕ ರಾಮನ ರಾಜಧಾನಿಯಿದ್ದಂತೆ. ಗೋರಖ್ ನಾಥ್ ಪರಂಪರೆ ಕರ್ನಾಟಕದಲ್ಲಿಯೂ ಇದೆ. ಸ್ವತಃ ಧರ್ಮಸ್ಥಳ ಮಂಜುನಾಥನೇ ಇಲ್ಲಿ ಗೋರಖನಾಥನಾಗಿದ್ದಾರೆ. ಅದರ ಪರಂಪರೆ ಆದಿಚುಂಚನಗಿರಿ ಮಠದಲ್ಲೂ ಮುಂದುವರಿದಿದೆ ಎಂದು ಶ್ರೀ ಬಾಲಗಂಗಾಧರ ಸ್ವಾಮೀಜಿಗಳನ್ನ ಸ್ಮರಿಸಿದರು.
ಪ್ರಸ್ತುತ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂ, ಬಿಜೆಪಿ ಕಾರ್ಯಕರ್ತರ ಕೊಲೆಗಳು ಆಗಿವೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ತ್ರಿವಳಿ ತಲಾಕ್ ಜಾರಿಗೆ ಕಾಂಗ್ರೆಸ್ ಅಡ್ಡಿ ಪಡಿಸುತ್ತಿದೆ. ಕಾಂಗ್ರೆಸ್‍ಗೆ ಮನುಕುಲದ ಹೆಣ್ಣು ಮಕ್ಕಳು ಗೌರವಯುತವಾಗಿ ಬದುಕುವುದು ಬೇಕಿಲ್ಲ ಎಂದು ಕಿಡಿಕಾರಿದರು.
ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರು ಫುಲ್ ಫಿದಾ ಆಗಿದ್ದರು. ‘ಯೋಗಿ ಯೋಗಿ’ ಎಂಬ ಘೋಷಣೆ ಅಬ್ಬರಿಸಿತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ, ಕೇಂದ್ರ ಸಚಿವ ಆನಂತಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಕುಂಬಳಗೂಡಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು, ಬಿಜಿಎಸ್ ಇಂಟರ್ ನ್ಯಾಷಿನಲ್ ರೆಸಿಡೆನ್ಸಿಯಲ್ ಶಾಲೆಯನ್ನು ವೀಕ್ಷಿಸಿದರು. ನಂತರ ಶಾಲಾ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು.
ಕುಂಬಳಗೂಡಿನ ಶಾಖಾ ಮಠದ ಬಳಿ ಯಾವುದೇ ಬಿಜೆಪಿ ನಾಯಕರು ಬರಲು ಅವಕಾಶ ನೀಡಿರಲಿಲ್ಲ. ಬಳಿಕ 10.30ರ ನಂತರ ಯೋಗಿ ಆದಿತ್ಯನಾಥ್ ಅವರು ವಿಜಯನಗರದ ಸಮಾವೇಶದಲ್ಲಿ ಭಾಗವಹಿಸಲು ತೆರಳಿದರು. ಸಮಾವೇಶದ ನಂತರ ವಿಜಯನಗರದ ಆದಿಚುಂಚನ ಗಿರಿ ಮಠಕ್ಕೆ ಭೇಟಿ ನೀಡಿದ್ದರು. ಯೋಗಿ ಅವರ ಆಗಮನ ಹಿನ್ನೆಲೆಯಲ್ಲಿ ಮಠದ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಮೂರು ಕೆಎಸ್ ಆರ್ ಪಿ ತುಕಡಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಯೋಗಿ ಆಗಮನ ಹಿನ್ನಲೆ ಮಠಕ್ಕೆ ಭಕ್ತರ ಪ್ರವೇಶ ನಿಷೇಧ ಮಾಡಲಾಗಿತ್ತು. ಕೆಲ ಕಾಲ ಮಠದಲ್ಲಿ ವಿಶ್ರಾಂತಿ ಪಡೆದ ಯೋಗಿ ಅದಿತ್ಯನಾಥ್ ಅವರು ನಂತರ ಮಠದಿಂದ ನೆರವಾಗಿ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದರು.
ಯಾಕೆ ಯೋಗಿಗೆ ಮಣೆ?
ಬಿಜೆಪಿ ಪಾಳೆಯದಲ್ಲಿ ಯೋಗಿ ಆದಿತ್ಯನಾಥ್ ಈಗ ಸ್ಟಾರ್ ಪ್ರಚಾರಕರಾಗಿದ್ದು ಉತ್ತರ ಪ್ರದೇಶ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತ್ತು. ಇದಾದ ಬಳಿಕ ಗುಜರಾತ್ ನಲ್ಲಿ ಯೋಗಿ ಭಾಷಣ ಮಾಡಿದ್ದು ಅಲ್ಲೂ ಯಶಸ್ಸು ಸಿಕ್ಕಿತ್ತು.
ಗುಜರಾತ್ ಚುನಾವಣೆಯ ಒಟ್ಟು 182 ಕ್ಷೇತ್ರಗಳನ್ನು ಬಿಜೆಪಿ ಎ, ಬಿ, ಸಿ ಎಂದು ಮೂರು ಭಾಗಗಳಾಗಿ ವಿಂಗಡಿಸಿತ್ತು. ಜಯ ಸಿಗುವ ಕ್ಷೇತ್ರಗಳನ್ನು ಎ, ಗೆಲ್ಲಲು ಕಷ್ಟವಾಗಿರುವ ಕ್ಷೇತ್ರಗಳನ್ನು ಬಿ, ಗೆಲ್ಲಲು ಸಿಕ್ಕಾಪಟ್ಟೆ ಕಷ್ಟವಿದೆ ಎನ್ನುವ ಕ್ಷೇತ್ರಗಳನ್ನು ಸಿ ಗುಂಪಿಗೆ ಸೇರಿಸಿತ್ತು. ಬಿ ಮತ್ತು ಸಿ ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ಈ 35 ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ಪರಿಣಾಮ ಬಿ ಮತ್ತು ಸಿ ಗುಂಪಿನಲ್ಲಿದ್ದ ಒಟ್ಟು 35 ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ ಗೆಲುವು ಕಂಡಿತ್ತು. ಈ ಎಲ್ಲ ಕಾರಣಕ್ಕಾಗಿ ಗುಜರಾತ್ ತಂತ್ರವನ್ನೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲೂ ಬಳಸಲು ಮುಂದಾಗುತ್ತಿದ್ದು, ಯೋಗಿ ಆದಿತ್ಯನಾಥ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಮುಂದಾಗಿದೆ ಎನ್ನಲಾಗಿದೆ.
https://www.youtube.com/watch?v=JOr6vyVKj94