ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಅಮೂಲ್ಯ ಪ್ರಕರಣದ ಬೆನ್ನಲ್ಲೇ ಕಾಶ್ಮೀರ ಮುಕ್ತಿ, ದಲಿತ ಮುಕ್ತಿ, ಆದಿವಾಸಿ ಮುಕ್ತಿ ಎನ್ನುವ ಭಿತ್ತಿಪತ್ರ ಹಿಡಿದ ಆರೋಪದ ಅಡಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಆರ್ದ್ರಾ ಳನ್ನು ಕುಟುಂಬಸ್ಥರು ಭೇಟಿಮಾಡಿದ್ದಾರೆ.
ದ್ರೋಶದ್ರೋಹಿ ಘೋಷಣೆ ಕೂಗಿ ಪರಪ್ಪನ ಅಗ್ರಹಾರ ಸೇರಿರುವ ಆರ್ದ್ರಾ ಳನ್ನು ಇಂದು ಆಕೆಯ ತಂದೆ ಹಾಗೂ ಕುಟುಂಬ ವರ್ಗ ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿ ಹಿಂತಿರುಗಿದ್ದಾರೆ.
ಆರ್ದ್ರಾ ಳ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾದ ಹಿನ್ನೆಲೆ ಆಕೆಯ ತಂದೆ ಶನಿವಾರ ಜೈಲಿಗೆ ಬಂದು ಮನೆಯಿಂದ ತಂದಿದ್ದ ಮಾತ್ರೆಗಳನ್ನು ಕೊಟ್ಟು ಹೋಗಿದ್ದರು. ಬಳಿಕ ಇಂದು ಆರ್ದ್ರಾ ತಂದೆ ಹಾಗೂ ಕುಟುಂಬ ವರ್ಗದವರು ಭೇಟಿಗೆ ಅನುಮತಿ ಪಡೆದು ಔಷಧಿಗಳ ಜೊತೆ ಆಗಮಿಸಿದ್ದರು. ಆಕೆಯನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಕೆಲ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮಗಳ ಭೇಟಿಯ ನಂತರ ಜೈಲಿನಿಂದ ಹೊರಬಂದ ಆರ್ದ್ರಾ ಕುಟುಂಬದವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಹಿಂತಿರುಗಿದ್ದಾರೆ.