ಬೆಂಗಳೂರು: ನಗರದ ಟ್ರಾಫಿಕ್ ಪೊಲೀಸರು ದಾಖಲೆ ಪ್ರಮಾಣದ ಹಣವನ್ನು ಸರ್ಕಾರಕ್ಕೆ ದುಡಿದು ಕೊಟ್ಟಿದ್ದಾರೆ. ಈ ವರ್ಷದಲ್ಲಿ ದಂಡದ ರೂಪವಾಗಿ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಬರೋಬ್ಬರಿ 92.79 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ 20 ಕೋಟಿ ರೂ. ಅಧಿಕ ಹಣವನ್ನು ಸಂಗ್ರಹ ಮಾಡಿದ್ದಾರೆ. ಅಕ್ಟೋಬರ್ ವೇಳೆಗೆ 92.79 ಕೋಟಿ ರೂ. ಸಂಗ್ರಹವಾಗಿದ್ದು, ನವೆಂಬರ್ ಮತ್ತು ಡಿಸೆಂಬರ್ ಅವಧಿ ಪೂರ್ಣಗೊಂಡರೆ ಈ ಮೊತ್ತ ನೂರು ಕೋಟಿ ರೂ. ದಾಟುವ ಸಾಧ್ಯತೆಯಿದೆ.
1998 ರಲ್ಲಿ 1 ಕೋಟಿ ರೂ. ಸಂಗ್ರಹವಾಗಿದ್ದರೆ, 2007ರಲ್ಲಿ 20 ಕೋಟಿ ರೂ.ಗೆ ತಲುಪಿತ್ತು. 2008-09 ರಲ್ಲಿ 30 ಕೋಟಿಗೆ ತಲುಪಿತ್ತು. 2012ರಲ್ಲಿ ಇದು 50 ಕೋಟಿಯನ್ನ ದಾಟಿದ್ರೆ, 2015ರಲ್ಲಿ 75 ಕೋಟಿ ಆಸುಪಾಸಿಗೆ ಬಂದು ನಿಂತಿತ್ತು. ಇದೀಗ 2017ರಲ್ಲಿ 100 ಕೋಟಿ ರೂ. ದಾಟುವುದು ಪಕ್ಕಾ ಆಗಿದೆ.
ಹೆಚ್ಚಾಗಿದ್ದು ಹೇಗೆ?
ಟ್ರಾಫಿಕ್ ನಿಯಮಗಳ ಉಲ್ಲಂಘನೆ ಕೇಸ್‍ಗಳ ಅಂಕಿ ಅಂಶದಲ್ಲಿ ಅಷ್ಟೊಂದು ಬದಲಾವಣೆಯಾಗಿಲ್ಲ. ಆದರೆ ದಂಡದ ಮೊತ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಹೇಗೆ ಬಹುರಾಷ್ಟ್ರೀಯ ಕಂಪನಿಗಳಿಲ್ಲಿ ಟಾರ್ಗೆಟ್ ಕೊಡಲಾಗುತ್ತದೋ ಅದೇ ರೀತಿ ಎಎಸ್‍ಐ, ಎಸ್‍ಐ ಗಳಿಗೆ ಟಾರ್ಗೆಟ್ ಕೊಡಲಾಗಿದೆ. ದಿನಕ್ಕೆ ಕನಿಷ್ಟ ಇಷ್ಟು ಕೇಸ್ ಹಾಕಲೇಬೇಕು. ಅಲ್ಲದೇ ಟೋಯಿಂಗ್ ಅಮೌಂಟ್ ಹೆಚ್ಚಳ ಮಾಡಲಾಗಿದ್ದು, ಸರ್ಕಾರಕ್ಕೆ ಅರ್ಧ ಮತ್ತು ಖಾಸಗಿ ಅವರಿಗೆ ಅರ್ಧ ಅಮೌಂಟ್ ಹೋಗ್ತಿದೆ. ಹೀಗಾಗಿ ಈ ಬಾರಿ ದಾಖಲೆ ಪ್ರಮಾಣದ ದಂಡ ವಸೂಲಾಗಿದೆ. ನೋ ಪಾರ್ಕಿಂಗ್ ಅಗ್ರ ಸ್ಥಾನದಲ್ಲಿದ್ದು, ಇದೂವರೆಗೆ 19 ಲಕ್ಷ ಕೇಸ್‍ಗಳು ಬುಕ್ ಆಗಿವೆ. ನಂತರದ ಸ್ಥಾನ ಹೆಲ್ಮೆಟ್ ಇಲ್ಲದೆ ವಾಹನ ಓಡಿಸಿ 17 ಲಕ್ಷ ಕೇಸ್‍ಗಳು ಬುಕ್ ಆಗಿವೆ.
2017ರಲ್ಲಿ ಯಾವ ತಿಂಗಳು ಎಷ್ಟು ಕೋಟಿ ಸಂಗ್ರಹ?
ಜನವರಿ – 6,12,97,100 ರೂ.
ಫೆಬ್ರವರಿ – 6,42,76,725 ರೂ.
ಮಾರ್ಚ್ – 9,55,17,875 ರೂ.
ಏಪ್ರಿಲ್ – 10,89,83,275 ರೂ.
ಮೇ – 12,06,46,450 ರೂ.
ಜೂನ್ – 10,65,34,602 ರೂ.
ಜುಲೈ – 10,30,97,700 ರೂ.
ಆಗಸ್ಟ್ – 9,21,12,350 ರೂ.
ಸೆಪ್ಟೆಂಬರ್ – 9,03,63,000 ರೂ.
ಅಕ್ಟೋಬರ್ – 8,51,57,200 ರೂ.
ಒಟ್ಟು – 92,79,86,277 ರೂ.
2016 ರಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ಸಂಗ್ರಹವಾದ ದಂಡದ ಮೊತ್ತ –66,96,74,516 ರೂ.