– ಬಾಮೈದನ ಹೆಸರಿಗೆ ಆಸ್ತಿ ಮಾಡೋಕೆ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ?
– ಸಿಎಂ ವಿರುದ್ಧ ಮುಡಾ ದಾಖಲೆ ಕೊಟ್ಟಿದ್ದು ಡಿಕೆಶಿ
ಬೆಂಗಳೂರು: 10 ವರ್ಷ ನಾವೇ ಸರ್ಕಾರದಲ್ಲಿ ಇರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳುತ್ತಾರೆ. ಆದರೆ ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ. ನಿಮ್ಮ ಪಾಪದ ಕೊಡ ತುಂಬಿದೆ. ನಮ್ಮ ಪಾದಯಾತ್ರೆ ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್‌ಗಳು ಬೀಳಬೇಕು. ಅದು ನಾಯಕನಿಂದಲೇ ಶುರುವಾಗಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದಲ್ಲಿ ಬಿಜೆಪಿ- ಜೆಡಿಎಸ್ (BJP-JDS) ಪಾದಯಾತ್ರೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀವು ಮುಡಾದ ಬಗ್ಗೆ ಮಾತನಾಡುತ್ತೀರಾ? ಅದರ ಬಗ್ಗೆ ಮಾತಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. 14 ಸೈಟ್ ಯಾಕೆ? ಎಷ್ಟು ಬೇಕಾದರೂ ಕಾನೂನು ಪ್ರಕಾರ ಪಡೆದುಕೊಳ್ಳಲಿ. ಇವರು ಕಾನೂನು ಮೀರಿ ಸೈಟ್ ಪಡೆದಿದ್ದಾರೆ ಎಂದು ದೂರಿದರು.
Advertisement
Advertisement
ಸಿದ್ದರಾಮಯ್ಯನವರೇ (Siddaramaiah) ಅದು ಯಾರ ಆಸ್ತಿ. ಮುಡಾ (MUDA) ಸರ್ಕಾರದ ಆಸ್ತಿ. ಬಡಾವಣೆ ಆಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಮಾಡಲು ಅವಕಾಶ ಇದೆಯಾ? ಇದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ? ಸರ್ಕಾರದ ಜಮೀನನ್ನ ನಿಮ್ಮ ಬಾಮೈದನ ಹೆಸರಿಗೆ ಹೇಗೆ ದಾಖಲಾತಿ ಮಾಡಿಕೊಟ್ಟರು. ಸಿದ್ದರಾಮಯ್ಯ ನನಗೆ ಇದ್ಯಾವುದು ಗೊತ್ತಿಲ್ಲ ಎನ್ನುತ್ತಾರೆ. 64 ಕೋಟಿ ಕೊಡಿ ಎನ್ನುತ್ತಿರಾ. ಅಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬಾರದೇ ಆಗಿದೆಯಾ? ನಿಮ್ಮ ಪ್ರಭಾವ ಬೀರದೇ ಇಲ್ಲ ಎನ್ನುವುದಕ್ಕೆ ಸಾಧ್ಯವಿದೆಯಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿ ಹರಿಹಾಯ್ದರು.
Advertisement
ಒಂದು ಮಾಧ್ಯಮದಲ್ಲಿ ಪ್ರಾಯೋಜಿತ ಸಂದರ್ಶನ ನೋಡಿದೆ. ಪ್ರಾಯೋಜಿತ ಸಂದರ್ಶನ ನೀಡಿದ್ದು ಇಡೀ ದೇಶದ ಇತಿಹಾಸದಲ್ಲಿಯೇ ಮೊದಲು. ನನ್ನದು ತೆರೆದ ಪುಸ್ತಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೆಂಪಣ್ಣ ಆಯೋಗದ ವರದಿ ತೆರಿಯಿರಿ. ಈಗ ದೇಸಾಯಿ ಹೆಸರಿನಲ್ಲಿ ಮುಡಾ ಕೇಸ್ ಮುಚ್ಚಿ ಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದರು.
Advertisement
ಪರಮೇಶ್ವರ್ ಕುಮಾರಸ್ವಾಮಿ ಬಣ್ಣ ಬಯಲಾಗಿದೆ ಎನ್ನುವ ಮಾತಿಗೆ, ಪರಮೇಶ್ವರ್ ಅವರೇ ನನ್ನ ಬಣ್ಣ ಯಾವತ್ತು ಬದಲಾವಣೆಯಾಗುವುದಿಲ್ಲ. ನನ್ನದು ಒರಿಜಿನಲ್ ಕಲರ್. 2006-2007 ರಲ್ಲಿ ನಾನು ಯಡಿಯೂರಪ್ಪಗೆ ಅಧಿಕಾರ ಕೊಟ್ಟಿದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ನಾನು ಅವತ್ತು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಎಂದಿದ್ದೆ. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಒಂದು ವೇಳೆ ಅವತ್ತು ಬಿಜೆಪಿ ಮತ್ತು ನಾವು ಒಟ್ಟಾಗಿ ಇದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ಪರಮೇಶ್ವರ್ ಅವರೇ 2018 ರಲ್ಲಿ ನನ್ನನ್ನು ಸಿಎಂ ಮಾಡಿ ಎಂದು ನಿಮ್ಮ ಮನೆಗೆ ಬಂದಿದ್ದಿನಾ? ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡಿ ಎಂದು ಹೇಳಿದರೂ ಒತ್ತಡ ಮಾಡಿ ನನ್ನನ್ನು ಸಿಎಂ ಮಾಡಿದ್ದೀರಿ. ನೀವು ನನ್ನನ್ನ ಹೇಗೆ ನಡೆಸಿಕೊಂಡಿದ್ದೀರಿ ಗೊತ್ತಿಲ್ಲವಾ ಎಂದು ಜರಿದರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್‌ವೈ
ದೇವೇಗೌಡರನ್ನ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಇಲ್ಲ. ಕಮ್ಯುನಿಸ್ಟ್ ಪಕ್ಷದ ಜೊತೆ ಸೇರಿ 13-14 ಪಕ್ಷ ಬೆಂಬಲ ಕೊಟ್ಟಿದ್ದರಿಂದ ಅವರು ಪ್ರಧಾನಿಯಾಗಿದ್ದರು. ಅವತ್ತು ದೇವೇಗೌಡರನ್ನು ಪ್ರಧಾನಿ ಕುರ್ಚಿಯಿಂದ ಕೆಳಗಿಳಿಸಿದ್ದು ಕಾಂಗ್ರೆಸ್. ಅವರು ದೇವೇಗೌಡರನ್ನು ಪ್ರಧಾನಿ ಕುರ್ಚಿಯಿಂದ ಅದ್ಯಾಕೆ ಕೆಳಗಿಳಿಸಿದರು ಎಂದು ಪ್ರಶ್ನಿಸಿದರು.
ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ದ ದಾಖಲಾತಿ ಕೊಟ್ಟಿದ್ದಾರೆ. ಅವರು ಯಾರ್ ಯಾರ ಕೈಯಲ್ಲಿ ದಾಖಲಾತಿ ಕೊಟ್ಟಿದ್ದಾರೆ ಎಂದು ನಮಗೆ ಗೊತ್ತಿದೆ. ಈಗ ನಾನು ಸಿದ್ದರಾಮಯ್ಯ ಪರ ಎಂದು ನಾಟಕ ಮಾಡುತ್ತಿದ್ದಾರೆ. ನೀವು 100 ಅಲ್ಲ ಇನ್ನು 200 ಪ್ರಶ್ನೆ ಕೇಳಿದರೂ ಉತ್ತರ ಕೊಡುತ್ತೇನೆ. ನಮ್ಮ ಕಾರ್ಯಕರ್ತರು ಉತ್ಸಾಹದಲ್ಲಿದ್ದು, ಈ ಸರ್ಕಾರ ತೆಗೆಯಬೇಕೆಂದು ನಿರ್ಧಾರ ಮಾಡಿದ್ದಾರೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ನೀವು ಗ್ಯಾರಂಟಿ ಹೆಸರಿನಲ್ಲಿ ಏನೇನು ಮಾಡುತ್ತಿದ್ದೀರಿ? ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಬಿರುಕು ತರಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಹಗರಣಗಳನ್ನ ಬಿಚ್ಚಿಡಲು ನಾವಿಬ್ಬರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತೀರುಗೇಟು ನೀಡಿದರು.
24 ಗಂಟೆಯಲ್ಲಿ ಮೇಕೆದಾಟು ತರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು ಎಂದು ಡಿಕೆಶಿ ಹೇಳುತ್ತಾರೆ. ಯಾರೋ ಹುಚ್ಚರು ಅವರಿಗೆ ಹೇಳಿರಬೇಕು. ನಾನು 24 ಗಂಟೆಯಲ್ಲಿ ಮೇಕೆದಾಟು ತರುತ್ತೇನೆ ಎಂದು ಹೇಳಿಲ್ಲ. ಹೇಳಿರುವುದನ್ನು ತೋರಿಸಿದರೆ ತಲೆ ಬಾಗುತ್ತೇನೆ. ತಾಕತ್ತು ಇದ್ದರೆ ನಿಮ್ಮ ಸ್ನೇಹಿತರಾದ ಡಿಎಂಕೆ ಸ್ಟಾಲಿನ್ ಜೊತೆ ಮಾತನಾಡಿ. ಇವರು ತಮಿಳುನಾಡಿಗೆ ಹೆಚ್ಚು ನೀರು ಬಿಟ್ಟಿದ್ದಾರೆ. ಈ ಬಾರಿ ಮೋದಿ ಅವರನ್ನು ಕಾನೂನು ಬದ್ದವಾಗಿ ಮನವೊಲಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಪಾದಯಾತ್ರೆಯ ಬಗ್ಗೆ ಯಾರ ಒತ್ತಡವೂ ಇಲ್ಲ. ನಾನು ಯಾವ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಅದನ್ನ ಕೈಗೊಂಡಿದ್ದೇನೆ. ಮುಕ್ತವಾಗಿ ಚರ್ಚೆ ಮಾಡಿಯೇ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ ಮುಂದೆ ಹಾಕಿದರೆ ಕಾಂಗ್ರೆಸ್‌ನವರು ಎಲ್ಲಿ ದಾಖಲೆ ತಿರುಚುತ್ತಾರೆ ಎಂದು ಪಾದಯಾತ್ರೆ ಮುಂದುವರೆಸಿದ್ದೇವೆ. ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್‌ಗಳು ಬೀಳಬೇಕು. ಅದು ಕ್ಯಾಪ್ಟನ್ ನಿಂದಲೇ ಶುರುವಾಗಬೇಕು. ಒಂದೇ ತಾಯಿ ಮಕ್ಕಳ ರೀತಿ ಒಟ್ಟಾಗಿ ಎರಡು ಪಕ್ಷಗಳು ಕೆಲಸ ಮಾಡಬೇಕು. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ವರ್ಗಾವಣೆ ದಂಧೆಯನ್ನ ಮಾಡುತ್ತಿದೆ. ಈ ಸರ್ಕಾರದ ವಿರುದ್ಧ ಎರಡು ಪಕ್ಷದ ಕಾರ್ಯಕರ್ತರು ಭಾಗಿಯಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಮಂಡ್ಯ ಮಾತ್ರವಲ್ಲ ಇಡೀ ಮೈಸೂರಿನವರಗೆ ಪಾದಯಾತ್ರೆ ನಡೆಯುತ್ತದೆ ಎಂದು ಹೇಳಿದರು.